Saturday, May 14, 2011

article on byrappa's novels


ಸಾಮಾನ್ಯ ಓದುಗನ ಗ್ರಹಿಕೆಯಲ್ಲಿ ಭೈರಪ್ಪ

ಲೇ: ಎಸ್ ಎನ್ ಸಿಂಹ. ಮೇಲುಕೋಟೆ.

ಸೃಷ್ಟಿಯ ಆರಂಭದಿಂದ ಇಂದಿನವರೆಗೂ ಮನುಷ್ಯನ ಹೃದಯವನ್ನು ಅನೇಕ ಚಿಂತೆ ಸಂತಾಪಗಳು ಬಾಧಿಸುತ್ತಲೇ ಇವೆ. ಅವುಗಳನ್ನು ನೀಗಿ ಜೀವನವನ್ನು ನೇರ್ಪಡಿಸಿಕೊಳ್ಳುವ ಯತ್ನದಲ್ಲಿ ಆತ ಹಲವು ಸಾಮಗ್ರಿಗಳ ನೆರವನ್ನು ಅಪೇಕ್ಷಿಸುತ್ತಾನೆ. ಅವುಗಳ ನೆರವಿನಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ತಾತ್ಕಾಲಿಕವಾಗಿಯಾದರೂ ಸಂತಾಪಶಮನವನ್ನು ಪಡೆಯುವಲ್ಲಿ ಸುಖಾಪೇಕ್ಷಿಯಾದ ಮಾನವ ಕೊಂಚಮಟ್ಟಿಗೆ ಯಶಸ್ವಿಯಾಗಿದ್ದಾನೆ.


ಇಂತಹ ಸುಖವನ್ನು ಪಡೆಯುವ ನಿಟ್ಟಿನಲ್ಲಿ ಅಗತ್ಯವಾದ ಕನಿಷ್ಠ ಸಾಮಗ್ರಿಗಳು ಯಾವುವೆಂದು ಸೂಫಿ ಸಂತ ಉಮರ್ ಖಯ್ಯಮನು ತನ್ನೊಂದು ರುಬಾಯಿಯಲ್ಲಿ ಹಿಡಿದಿಟ್ಟಿದ್ದಾನೆ. ರಸ‌ಋಷಿ ಡಿ.ವಿ.ಜಿ. ಅವರು ಮಾಡಿರುವ ಅದರ ಸುಂದರವಾದ ಅನುವಾದ ಹೀಗಿದೆ..


ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು |


ಮೇಣ್ ಮುಗುದೆ ನೀನೆನ್ನ ಬಳಿ ಕುಳಿತು ಪಾಡಲಹ
ಕಾಡಾದೊಡೇನದುವೆ ಸಗ್ಗಸುಖವೆನಗೆ ||


ಖಯ್ಯಮನಿಗಿಂತಲೂ ತುಂಬ ಹಿಂದೆಯೇ ನಮ್ಮ ಭರ್ತೃಹರಿ ಹೇಳುವುದಾದರೂ ಇದನ್ನೇ..


ಅಗ್ರೇ ಗೀತಂ ಸರಸ ಕವಯಃ ಪಾರ್ಶ್ವತೋ ದಾಕ್ಷಿಣಾತ್ಯಾಃ
ಪಶ್ಚಾಲ್ಲೀಲಾವಲಯರಣಿತಂ ಚಾಮರಗ್ರಾಹಿಣೀನಾಮ್ |


ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ
ನೋಚೇಚ್ಚೇತಃ ಪ್ರವಿಶ ಸಹಸಾ ನಿರ್ವಿಕಲ್ಪೇ ಸಮಾಧೌ ||


ಮುಂದೆ ಸೊಗಸಾದ ಸಂಗೀತ, ಇಕ್ಕೆಲಗಳಲ್ಲಿ ರಸವತ್ಕವಿಗಳ ಗೋಷ್ಠಿ, ಹಿಂದೆ ಚಾಮರ ಬೀಸುವ ವಿಲಾಸಿನಿಯರ ಕೈಬಳೆಗಳ ನಿನದ, ಇವಿಷ್ಟು ಲಭ್ಯವಾದರೆ ಈ ಸಂಸಾರಸುಖದಲ್ಲೇ ಮುಳುಗಿಬಿಡು. ಇಲ್ಲವಾದರೆ ಓ ಮನಸ್ಸೇ! ಹೇಗಾದರೂ ನಿರ್ವಿಕಲ್ಪ ಸಮಾಧಿಯಲ್ಲಿ ತೊಡಗಿಸಿಕೋ ಎನ್ನುತ್ತಾನೆ ಭರ್ತೃಹರಿ.


ಕೊನೆಯ ವಾಕ್ಯವು ನಮಗೀಗ ಅಪ್ರಸ್ತುತ. ಸುಖಾಪೇಕ್ಷೆಯಲ್ಲಿ ಈರ್ವರು ತತ್ತ್ವಜ್ಞಕವಿಗಳೂ ಅವಶ್ಯವೆಂದು ಪರಿಗಣಿಸಿರುವ ಸಾಮಾನ್ಯ ಸಾಮಗ್ರಿಗಳು ಮೂರು. ಸಂಗೀತ, ಸಾಹಿತ್ಯ ಮತ್ತು ಭಿನ್ನಲಿಂಗಿಗಳ ಸಾಂಗತ್ಯ !


ಪ್ರಕೃತ ಈ ಸಾಹಿತ್ಯವು ಗದ್ಯ-ಪದ್ಯ ಭೇದದಿಂದ ತೋರಿಬಂದರೂ ಅಂತಿಮವಾಗಿ ಸಾಮಾನ್ಯ ಓದುಗನ ಮಿದುಳನ್ನು ತಲಪುವಾಗ ಗದ್ಯರೂಪವನ್ನೇ ಪಡೆಯುತ್ತದೆ. ಪದ್ಯವನ್ನು ಅರ್ಥೈಸಿಕೊಳ್ಳುವಲ್ಲಿ ವ್ಯಾಖ್ಯಾನ ವಿವರಣೆಗಳು ಅಗತ್ಯವಾದರೆ, ಅಂತಹ ಮರುವಿವರಣೆಯ ಅಗತ್ಯ ಬೀಳದಂತೆ ಗದ್ಯಸಾಹಿತ್ಯವನ್ನು ರಚಿಸುವುದು ಒಂದು ಸಾಹಸವೇ ಆಗಿದೆ. ಆದ್ದರಿಂದಲೇ ಗದ್ಯಂ ಕವೀನಾಂ ನಿಕಷಂ ವದಂತಿ ಎಂಬ ಉಕ್ತಿ ಹೊರಟಿದ್ದು. ಮತ್ತು ಪ್ರಾಚೀನ ಕವಿಗಳಲ್ಲಿ ಬಹುತೇಕರು ಪದ್ಯವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡದ್ದು. ಇವತ್ತಿಗೂ ಆರಂಭಿಕ ಬರಹಗಾರರು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಕವನವನ್ನೇ ಆಶ್ರಯಿಸುವುದು ವೇದ್ಯವೇ ಇದೆ. ಇನ್ನೂ ಚೋದ್ಯವೆಂದರೆ, ಪದ್ಯದ ಹೆಸರಿನಲ್ಲಿ ಗದ್ಯವನ್ನೇ ತುಂಡರಿಸಿ ಬರೆಯುವ ಪರಂಪರೆ ಬೆಳೆದಿರುವುದು !


ಪದ್ಯದಲ್ಲಿ ಕವಿಗೆ ತುಂಬ ಸ್ವಾತಂತ್ರ್ಯವಿದೆ ಮತ್ತು ತನಗೇ ಅರ್ಥವಾಗದ ಸಂಗತಿಗಳನ್ನೂ ಅಳವಡಿಸುವ ಸೌಲಭ್ಯವೂ ಇದೆ! ಚಿಂತನೆಯು ಅಪಕ್ವವಾಗಿದ್ದಾಗ್ಯೂ ಅಮೂರ್ತದ ಹೆಸರಿನಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ಸಿದ್ಧತಂತ್ರವಿದೆ. ಆದರೆ ಗದ್ಯಲೇಖಕನಿಗೆ ಇಷ್ಟೊಂದು ಸೌಕರ‍್ಯಗಳಿಲ್ಲ. ಆತ ತಾನು ಹೇಳಬೇಕಾದ ವಿಷಯವನ್ನು ಸ್ಪಷ್ಟವಾಗಿ, ಸರಳವಾಗಿ, ಓದುಗನಿಗೆ ಗೊಂದಲವಾಗದಂತೆ ನಿಸ್ಸಂದಿಗ್ಧವಾಗಿ ನಿರೂಪಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಇಷ್ಟಾಗಿಯೂ ಓಜಸ್ಸಮಾಸಭೂಯಿಷ್ಠತೆಯೇ ಮುಂತಾದ ಗುಣಗಳನ್ನು ಕಾಯ್ದುಕೊಂಡು ನಿರೂಪಣೆಯು ನೀರಸವೂ ಕಠಿಣವೂ ಆಗದಂತೆ ಎಚ್ಚರವಹಿಸಬೇಕಾಗುತ್ತದೆ.
ಪದ್ಯಕಾವ್ಯಗಳೇ ಅಧಿಕವಾಗಿದ್ದ ಕಾಲದಲ್ಲಿ ಅವಕ್ಕೆ ವ್ಯಾಖ್ಯಾನಗಳೂ ವಿಮರ್ಶೆಗಳೂ ಅವಶ್ಯವಾದದ್ದು ಸಹಜವೇ. ಪ್ರಾಚೀನರಲ್ಲಿ ವಿಮರ್ಶ ಶಬ್ದವು, ಇಂದು ವ್ಯಾಪಕವಾಗಿರುವ ಅರ್ಥದಲ್ಲಿ ಬಳಕೆಯಾಗುತ್ತಿದ್ದಿಲ್ಲ. ಮೃಶ್ ಧಾತುವಿನ ಜ್ಞಾನ ಎಂಬ ಅರ್ಥಕ್ಕೆ ವಿ ಉಪಸರ್ಗದ ವಿಶೇಷ ಎಂಬ ಅರ್ಥ ಸೇರಿ, ವಿಶೇಷವಾಗಿ ತಿಳಿಯುವುದು ಎಂಬ ಅರ್ಥದಲ್ಲಿ ವಿಮರ್ಶ ಶಬ್ದವು ಪ್ರಯೋಗಿಸಲ್ಪಡುತ್ತಿತ್ತು. ಅಂದರೆ ಕಾವ್ಯದ ಗೂಢಾರ್ಥವನ್ನು ಸಾಮಾನ್ಯರಿಗೆ ಹೊಮ್ಮಿಸುವ, ಸಂಕೀರ್ಣ ಭಾಗಗಳನ್ನು ವಿವರಿಸುವ ವ್ಯಾಖ್ಯಾನಕ್ರಿಯೆಯಾಗಿತ್ತು ಈ ವಿಮರ್ಶೆ.
ಆದರೆ ಒಂದು ಕೃತಿಯ ಗುಣಾವಗುಣಗಳನ್ನು ಒರೆ ಹಚ್ಚುವ ಸಂಪ್ರದಾಯವೇ ಇರಲಿಲ್ಲವೆಂದಲ್ಲ. ವ್ಯಾಖ್ಯಾನದ ಜೊತೆಗೇ ಸಾಗುವ ಈ ಕ್ರಿಯೆಗೆ ಪರಿಮರ್ಶ ಎಂಬ ಶಬ್ದವನ್ನು ಬಳಸಲಾಗುತ್ತಿತ್ತು ಅಷ್ಟೇ. ಸುತ್ತುವರಿದು, ಎಲ್ಲ ದಿಶೆಗಳಿಂದಲೂ ತಿಳಿಯುವುದು ಎಂಬರ್ಥದಲ್ಲಿ ಪರಿಮರ್ಶ ಶಬ್ದ ಬಳಸಲ್ಪಟ್ಟಿದೆ. ಕವಿಹೃದಯವನ್ನು ಸಾಮಾನ್ಯರಿಗೆ ಬಿಡಿಸಿ ತೋರಿಸುವುದಷ್ಟೇ ವಿಮರ್ಶಕನ ಕೆಲಸ. ಪ್ರಾಚೀನ ವ್ಯಾಖ್ಯಾತೃಗಳು ಕಾವ್ಯದಲ್ಲಿ ವ್ಯಾಕರಣದೋಷಗಳಿದ್ದರೆ ಆಕ್ಷೇಪಿಸುತ್ತಿದ್ದರೇ ವಿನಾ ಕವಿಯ ಉದ್ದೇಶವನ್ನೇ ಪ್ರಶ್ನಿಸುವ, ಅಲ್ಲಗಳೆಯುವ, ಅಥವಾ ಹೀಗೆಯೇ ಬರೆಯಬೇಕಿತ್ತೆಂಬ ನಿರ್ದೇಶನಗಳನ್ನು ನೀಡುವ ವಿಪರೀತ ಸಾಹಸ ಮಾಡುತ್ತಿದ್ದಿಲ್ಲ ಮತ್ತು ಕಾವ್ಯಕರ್ತನಿಗಿಂತಲೂ ತಾನು ಶ್ರೇಷ್ಠನೆನ್ನುವ ಅಹಂಭಾವ ತೋರಿದ್ದಿಲ್ಲ.


ಆಧುನಿಕ ವಿಮರ್ಶೆಯು ಸಾಗಿರುವ, ಸಾಗುತ್ತಿರುವ ಹಾದಿಯನ್ನು ಕಂಡಾಗ ವಿಮರ್ಶೆಯ ಅಗತ್ಯವನ್ನೇ ಪ್ರಶ್ನಿಸಬೇಕಾದ ಆವಶ್ಯಕತೆ ಒದಗುತ್ತದೆ. ಇಂದು ವಿಮರ್ಶೆಯಲ್ಲಿನ ವಿ ಉಪಸರ್ಗವು ವಿಪರೀತ ಅಂದರೆ ವಿರುದ್ಧ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆಯೋ ಎಂಬ ಸಂದೇಹ ಕಾಡುತ್ತದೆ. ಯಾವೊಂದು ಕೃತಿಯ ಬಗೆಗೆ ವಿಪರೀತಜ್ಞಾನ ಅಂದರೆ ವಿರುದ್ಧ ತಿಳಿವಳಿಕೆಯನ್ನು ಪ್ರದರ್ಶಿಸುವುದೇ ವಿಮರ್ಶೆಯ ಗುರಿಯಾಗಿರುವಂತಿದೆ. ಒಂದು ಕೃತಿಯನ್ನು ಓದುಗನಿಗೆ ಪರಿಚಯ ಮಾಡಿಸುವ ಕ್ರಿಯೆಯಾಗಬೇಕಾದ ವಿಮರ್ಶೆಯು ಬಹುತೇಕ ಸಂದರ್ಭಗಳಲ್ಲಿ ವಿಮರ್ಶಕನ ಮನೋಭಾವವನ್ನು ಅನುಸರಿಸಿ; ಟೀಕಿಸುವುದರಲ್ಲೋ, ದೋಷಗಳನ್ನು ಆರೋಪಿಸಿ ಕೃತಿಯು ನಿಷ್ಪ್ರಯೋಜಕವೆಂದು ಘೋಷಿಸುವುದರಲ್ಲೋ, ಹೀಗೆಯೇ ಬರೆಯಬೇಕಿತ್ತು ಎಂದು ನಿರ್ದೇಶಿಸುವಲ್ಲೋ ಉದ್ಯುಕ್ತವಾಗಿ, ಅಂತಿಮವಾಗಿ ಓದುಗನನ್ನು ಕೃತಿಯಿಂದ ವಿಮುಖಗೊಳಿಸುವ ಕ್ರಿಯೆಯಾಗಿ ಪರಿವರ್ತನೆಯಾಗಿದೆ.


ವಿಮರ್ಶೆಯ ಆಡಂಬರದಿಂದ ವಿಭ್ರಮಗೊಳ್ಳುವ ಓದುಗನು ಮೂಲ ಕೃತಿಯಷ್ಟನ್ನೂ ಓದುವ ತಾಳ್ಮೆಯನ್ನು ಕಳೆದುಕೊಂಡು ವಿಮರ್ಶಮಾತ್ರದಿಂದಲೇ ತೃಪ್ತನಾಗುತ್ತಾನೆ. ಮತ್ತು ಕೃತಿಯ ಬಗೆಗೆ ತನಗೆ ವಿಶೇಷ ಜ್ಞಾನವು ಲಭ್ಯವಾಗಿದೆಯೆಂದು ಭಾವಿಸುತ್ತಾನೆ. ಕೃತಿಯನ್ನೇ ಓದಿ ತಂತಮ್ಮ ಸ್ವಂತ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲಾಗದ ಅಶಕ್ತರಿಗೆ ಈ ಸುಲಭಮಾರ್ಗವು ಆಕರ್ಷಕವಾಗಿರುವುದರಲ್ಲಿ ಆಶ್ಚರ‍್ಯವೇನಿಲ್ಲ. ಬೇರೊಬ್ಬರ ಬೌದ್ಧಿಕ ಕ್ರಿಯೆಯನ್ನು ತಮ್ಮದೆಂದು ಪರಿಭಾವಿಸಿ ಆರೋಪಿಸಿಕೊಳ್ಳುವ ಒಂದು ಬಗೆಯ ವ್ಯಭಿಚಾರ ಇದೆಂಬಂತೆ ಕಾಣುತ್ತದೆ. ವ್ಯಭಿಚಾರವು ಯಾವ ಕಾಲಕ್ಕೂ ಆಕರ್ಷಕವೇ ಆಗಿದೆಯಲ್ಲವೇ !


ಕೃತಿಕಾರನಿಗಿಂತಲೂ ವಿಮರ್ಶಕನು ಹೆಚ್ಚಿನವನೆಂಬ ಹಮ್ಮನ್ನು ತೋರ ಹೊರಟು, ವಿಮರ್ಶಕರು ಈ ಹಾದಿ ಹಿಡಿದಿರುವಂತಿದೆ. ಲೇಖಕನ ಅಭಿಪ್ರಾಯವನ್ನೆಲ್ಲ ಒಪ್ಪಿಬಿಟ್ಟರೆ ಅವನ ಪಾರಮ್ಯವನ್ನು ಒಪ್ಪಿದಂತಾಗುತ್ತದೆ ಎಂಬ ಭಯವೂ ಇದಕ್ಕೆ ಕಾರಣವಿರಬಹುದು. ಅದಕ್ಕಾಗಿ ಅನಿವಾರ‍್ಯವಾಗಿಯಾದರೂ ಟೀಕೆ ಮಾಡುವುದು ಅಗತ್ಯವಾಗುತ್ತದೆ. ಅಲ್ಲದೆ ಸಮರ್ಥನೆಗಿಂತಲೂ ಟೀಕಿಸುವುದರಿಂದಾಗಿ ತಮಗೆ ಹೆಚ್ಚು ಪ್ರಚಾರ ಸಿಗುವುದೆಂಬ ಅಭಿಲಾಷೆಯೂ ಇದ್ದಂತಿದೆ.


ನಿಜವಾಗಿಯೂ ಇಂದಿನ ವಿಮರ್ಶೆಗಳಿಂದ ಓದುಗನಿಗೆ ಏನಾದರೂ ಲಾಭವಿದೆಯೇ? ಸಾಹಿತ್ಯದ ಮೂಲೋದ್ದೇಶವಾದ ರಸೋದ್ದೀಪನೆಯನ್ನು ಹೆಚ್ಚಿಸುವಲ್ಲಿ ಅವೇನಾದರೂ ಸಹಕಾರಿ ಕಾರಣಗಳಾಗಿವೆಯೇ? ಎಂದರೆ, ಬಹುತೇಕ ಇಲ್ಲ ಎಂಬ ಉತ್ತರವೇ ದೊರೆಯುತ್ತದೆ.
ಇಷ್ಟಕ್ಕೂ ಪ್ರತಿಯೊಬ್ಬ ಓದುಗನೂ ವಿಮರ್ಶಕನೇ. ತನ್ನ ತನ್ನ ಗ್ರಹಿಕೆಯ ಸಾಮರ್ಥ್ಯ, ಸಾಂಸ್ಕೃತಿಕ ಹಿನ್ನೆಲೆ, ಪೂರ್ವಬೋಧೆ, ಓದುವಿಕೆಯ ಉದ್ದೇಶ ಇವು ಓದುಗನಿಂದ ಓದುಗನಿಗೆ ಭಿನ್ನವಾಗಿರುತ್ತವೆ. ಹೀಗಾಗಿ ವಿಮರ್ಶಕರೆಂದು ಸಾರಿಕೊಳ್ಳಲ್ಪಟ್ಟವರು ಸಮಸ್ತ ವಾಚಕವರ್ಗದ ಪ್ರತಿನಿಧಿಗಳಾಗುವುದು ಕೂಡ ಶಕ್ಯವಿಲ್ಲ. ಸಮಾನ ಮನಸ್ಕರ ಸಣ್ಣ ಗುಂಪೊಂದನ್ನು ಅವರು ಪ್ರತಿನಿಧಿಸಬಹುದಾದರೂ, ಅಂತಹ ಗುಂಪುಗಳು ಅಸಂಖ್ಯವಾಗಿರಬಹುದಾದ ಹಿನ್ನೆಲೆಯಲ್ಲಿ ಕೃತಿಕಾರನ ಶ್ರೇಷ್ಠತೆಯನ್ನೇ ಒಪ್ಪಬೇಕಾಗುತ್ತದೆ.


ಹೀಗೆ ತಮ್ಮ ಪಾಂಡಿತ್ಯದ ಪ್ರದರ್ಶನದಲ್ಲೇ ನಿರತವಾಗಿಬಿಡುವಂತಹ ವಿಮರ್ಶೆಗಳಿಂದ ಸಾಮಾನ್ಯ ಓದುಗನಿಗೆ ಯಾವುದೇ ಹೆಚ್ಚಿನ ಲಾಭವಿಲ್ಲವಾದರೂ, ಲೇಖಕನಿಗೆ ಅವು ಉಪಕಾರಿಯಾಗಬಲ್ಲವು. ವಸ್ತುನಿಷ್ಠೆ ಹಾಗೂ ಪೂರ್ವಗ್ರಹ ರಹಿತ ದೃಷ್ಟಿಕೋನದಿಂದ ನೀಡಲ್ಪಟ್ಟ ಯಾವುದೇ ವಿಮರ್ಶೆಯೂ ಲೇಖಕನ ಬೆಳವಣಿಗೆಗೆ ಸಹಕಾರಿಯಾಗಬಲ್ಲದು. ಈ ಒಂದು ದೃಷ್ಟಿಯಿಂದ ಮಾತ್ರವೇ ಇಂದು ವಿಮರ್ಶೆಗೆ ಬೆಲೆ ನೀಡಬೇಕಿದೆ. ಕೃತಿಗಿಂತಲೂ ವಿಮರ್ಶೆಯು ದೊಡ್ಡದು, ತಮ್ಮ ವಿಮರ್ಶೆಗಳಿಂದಲೇ ಕೃತಿಯ ಮೌಲ್ಯವು ಹೆಚ್ಚುತ್ತದೆ, ಮತ್ತು ಲೇಖಕನಿಗೆ ಪ್ರಚಾರವೂ ಅಸ್ತಿತ್ವವೂ ಲಭ್ಯವಾಗುತ್ತದೆ ಎಂಬಂತಹ ವಾತಾವರಣವನ್ನು ಸೃಷ್ಟಿ ಮಾಡಿರುವ ವಿಮರ್ಶಕರ ಹುನ್ನಾರವು, ಇತ್ತೀಚೆಗೆ ಪತ್ರಿಕಾರಂಗದಲ್ಲಿ ಹೆಚ್ಚುತ್ತಿರುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಸಮಾನವಾಗಿ ಕಂಡುಬರುತ್ತದೆ. ರಂಜನೆಯನ್ನೂ, ರಸೋದ್ದೀಪನೆಯನ್ನೂ ಅಪೇಕ್ಷಿಸುವ ನೈಜ ಓದುಗನು, ಪತ್ರಿಕೆಗಳ ಕಾಲಂಗಳನ್ನು ತುಂಬುವ ಇಂತಹ ವಿಮರ್ಶೆಗಳಿಗೆ ಮರುಳಾಗುವುದಿಲ್ಲ. ಮತ್ತು ವಿಮರ್ಶೆಗಳಿಂದ ವಿಮರ್ಶಕನ ಯೋಗ್ಯತೆಯನ್ನು ಮಾತ್ರ ಅಳೆದುಕೊಳ್ಳುತ್ತಾನೆ ಎಂಬುದು ನನ್ನ ಸ್ವಂತ ಅನುಭವವಾಗಿದೆ.


ಅಂತಿಮವಾಗಿ ವಿಮರ್ಶೆಯ ಬಗೆಗೆ ಹೇಳಬೇಕಿರುವುದು ಇಷ್ಟೇ. ಯಾವೊಬ್ಬ ವಿಮರ್ಶಕನೂ ಸಮಸ್ತ ವಾಚಕವರ್ಗದ ಪ್ರತಿನಿಧಿಯಲ್ಲ. ಕೃತಿಕಾರನಿಗಿಂದ ದೊಡ್ಡವನೂ ಅಲ್ಲ. ವಿಮರ್ಶೆಗಳು ವಿಮರ್ಶಕನ ಪಾಂಡಿತ್ಯದ ದ್ಯೋತಕ ಮಾತ್ರ ಮತ್ತು ಅವುಗಳ ಅಗತ್ಯ ಲೇಖಕನಿಗೆ ಮಾತ್ರ.


ಅಲ್ಲದೆ ಆಧುನಿಕ ವಿಮರ್ಶಕರು ಸಾಮಾಜಿಕ ಬದ್ಧತೆ ಎಂಬೊಂದು ಹೊಸ ಹುಸಿ ಮಾನದಂಡವನ್ನು ಇಟ್ಟುಕೊಂಡಿರುವುದು ಕಾಣುತ್ತದೆ. ರಸೋದ್ದೀಪಕವಾದ ಸಾಹಿತ್ಯವು ವಾಚಕನಲ್ಲಿ ಭಾವಪ್ರಕರ್ಷವನ್ನೂ, ವೈಚಾರಿಕತೆಯನ್ನೂ ಉಂಟುಮಾಡಿ ಮನಸ್ಸಿಗೆ ಸಂಸ್ಕಾರವನ್ನು ನೀಡುತ್ತದೆ. ಅದು ಸಾಹಿತ್ಯದಿಂದ ನವಿರಾಗಿ ಆಗಬೇಕಾದ ಕೆಲಸ. ಬದಲಾಗಿ ಇಂದು ಸಾಹಿತಿಯು ಸಮಾಜವನ್ನು ತಿದ್ದುವ ಕೆಲಸವನ್ನು ನೇರವಾಗಿ ಮಾಡಬೇಕು ಎಂದು ಆಗ್ರಹಿಸುವಂತೆ ತೋರುತ್ತದೆ. ರಾಜಕೀಯ ಸಿದ್ಧಾಂತಗಳನ್ನು ತುಷ್ಟೀಕರಿಸುವ ಹಿನ್ನೆಲೆಯಲ್ಲಿ ಇಂತಹ ಕ್ರಾಂತಿಯ ಕರೆಯನ್ನು, ಬದಲಾವಣೆಯ ಕೂಗನ್ನು, ಶೋಷಣೆಯ ವಿರುದ್ಧ ಜಾಗೃತಿಯನ್ನು, ಹುಯಿಲೆಬ್ಬಿಸಿ ಘೋಷಣೆಯಂತೆ ಮಾಡದ ಸಾಹಿತ್ಯವನ್ನು ವಿಮರ್ಶಕರು ನಿಷ್ಪ್ರಯೋಜಕ, ಸಾಮಾಜಿಕ ಬದ್ಧತೆ ರಹಿತ, ಪ್ರಗತಿ ವಿರೋಧಿ, ಪುರೋಹಿತಶಾಹಿ ಎಂದೆಲ್ಲ ಹಣೆಪಟ್ಟಿ ಹಚ್ಚಿ ವರ್ಗೀಕರಿಸುವುದು ಹಾಸ್ಯಾಸ್ಪದವಾಗಿದೆ. ರಾಜಕಾರಣಿಗಳ ಭಾಷಣಗಳಂತೆಯೂ, ಪತ್ರಿಕಾ ವರದಿಗಳಂತೆಯೂ ಸೃಜನಶೀಲ ಸಾಹಿತ್ಯವು ಕೂಡ ಇರಬೇಕೆಂದು ಇವರ ಬಯಕೆಯೇ? (ಸರ್ಜನಶೀಲ ಎಂಬುದು ವ್ಯಾಕರಣಶುದ್ಧ ಪ್ರಯೋಗವಾದರೂ, ಪ್ರಯೋಗಶರಣತೆಯಿಂದ ಇದನ್ನೇ ಬಳಸಬೇಕಾಗಿದೆ).


ಈ ಹಿನ್ನೆಲೆಯಲ್ಲಿ ವಿಮರ್ಶಕರಿಂದ ಭೈರಪ್ಪನವರಿಗೆ ಅನ್ಯಾಯವಾಗಿದೆ ಎಂಬಂತಹ ಮಾತುಗಳು ಅರ್ಥಹೀನ ಎಂದು ನಾನು ಭಾವಿಸುತ್ತೇನೆ. ಇದಕ್ಕೆ ಸಾಮತಿಯಾಗಿ ರಾಜರತ್ನಂ ಅವರ ವಿಚಾರರಶ್ಮಿಯೊಂದನ್ನು ನೆನೆಯಬಹುದು. ಒಂದು ಐದಾರು ವರ್ಷದ ಚಿಕ್ಕ ಮಗು ತಾಯಿಯ ಬಳಿ ಬಂದು ಹೇಳುತ್ತದೆ. ಅಮ್ಮಾ ನಾನು ಒಂಭತ್ತು ಅಡಿ ಎತ್ತರ ಇದ್ದೇನೆ. ತಾಯಿಗೆ ಆಶ್ಚರ‍್ಯ. ಅದು ಹೇಗೋ ಮಗೂ ಎನ್ನುತ್ತಾಳೆ. ನನ್ನದೇ ಒಂದು ಸ್ಕೇಲ್ ಮಾಡಿಕೊಂಡಿದ್ದೇನೆ. ಅದರ ಪ್ರಕಾರ ೯ ಅಡಿ ಇದ್ದೇನೆ! ಎನ್ನುತ್ತದೆ ಆ ಮಗು. ತಾರ್ಕಿಕವಾಗಿ ನೋಡುವುದಾದರೆ ಮಗುವಿನ ಮಾತು ಸುಳ್ಳಲ್ಲ. ಆದರೆ ವಾಸ್ತವಿಕವಾಗಿ ನಿಜವೂ ಅಲ್ಲ. ಇಂದಿನ ವಿಮರ್ಶಕರೂ ಆ ಮಗುವಿನಂಥವರೇ. ತಂತಮ್ಮದೇ ಸ್ಕೇಲುಗಳನ್ನು ಮಾಡಿಕೊಂಡಿದ್ದಾರೆ. ಆ ಸ್ಕೇಲುಗಳ ಪ್ರಕಾರ ಅವರ ಅಭಿಪ್ರಾಯಗಳೂ ಸತ್ಯಸ್ಯ ಸತ್ಯ!
ಆದರೂ ಮಾಧ್ಯಮ ವಿಜೃಂಭಿಗಳಾದ ವಿಮರ್ಶಕರ ಪ್ರತಿರೋಧದ ನಡುವೆಯೂ ತಮ್ಮದೇ ಆದ ಅಪಾರ ಓದುಗವರ್ಗವನ್ನು ಗಳಿಸಿಕೊಳ್ಳುವಲ್ಲಿ ಭೈರಪ್ಪನವರು ಸಾಧಿಸಿರುವ ಯಶಸ್ಸು ಅಭಿನಂದನೀಯ. ಇದಕ್ಕೆ ಅವರು ಮಾಡಿಕೊಳ್ಳುವ ವಸ್ತುವಿನ ಆಯ್ಕೆ, ತದಧ್ಯಯನ ಪರಿಪಾಕ ಹಾಗೂ ಕಥನ ತಂತ್ರಗಳು ಮುಖ್ಯ ಕಾರಣಗಳೆಂದು ನಾನು ಭಾವಿಸುತ್ತೇನೆ.


ವೈಚಾರಿಕ ಸ್ಪಷ್ಟತೆ ಹಾಗೂ ಭಾಷೆಯ ಮೇಲಿನ ಪ್ರಭುತ್ವ ಇವೆರಡರಲ್ಲಿ ಯಾವೊಂದು ಕುಂದಿದರೂ ಸಂವಹನವು ಪರಿಣಾಮಕಾರಿಯಾಗಿ ಆಗುವುದಿಲ್ಲ. ಭೈರಪ್ಪನವರ ಸಫಲತೆಯು ಇವೆರಡನ್ನೂ ಹದವರಿತು ಸಂಮಿಳನಗೊಳಿಸುವಲ್ಲಿ ಅಡಗಿದೆ. ಇಲ್ಲಿ ಭಾಷೆಯ ಮೇಲಿನ ಪ್ರಭುತ್ವ ಎನ್ನುವಲ್ಲಿ ವ್ಯಾಕರಣಶುದ್ಧವಾದ ಗ್ರಾಂಥಿಕ ಭಾಷೆಯನ್ನೇ ಬಳಸಬೇಕು ಎಂದು ಅರ್ಥವಲ್ಲ. ಸಂದರ್ಭೋಚಿತವಾಗಿ, ಸನ್ನಿವೇಶಕ್ಕೆ ಅನುಗುಣವಾಗಿ ಭಾಷೆಯನ್ನು ಬಳಸಿ ದುಡಿಸಿಕೊಳ್ಳುವುದು ಅಗತ್ಯ. ವಿಚಾರವು ಭಾಷೆಯ ಮೂಲಕ ಓದುಗನನ್ನು ತಲಪುವುದು ಲೇಖಕನ ಕಲಾವಂತಿಕೆಯನ್ನು ಅವಲಂಬಿಸಿದೆ.


ಇಲ್ಲಿ ಸತ್ಯಕಾಮರೊಂದಿಗೆ ಭೈರಪ್ಪನವರನ್ನು ಹೋಲಿಸಿ ನೋಡುವುದು ಕೊಂಚ ಆವಶ್ಯಕ. ಪೌರಾಣಿಕ ಪಾತ್ರಗಳನ್ನು ಆಧುನಿಕ ಮನಃಪರಿಪಾಕದಿಂದ ಪುನಸ್ಸೃಷ್ಟಿಸುವುದು ಸತ್ಯಕಾಮರ ಪ್ರಿಯವಾದ ಹವ್ಯಾಸ. ಅವರ ಬಹುತೇಕ ಕಾದಂಬರಿಗಳು ಇಂತಹ ಭಿತ್ತಿಯ ಮೇಲೆಯೇ ಬರೆಯಲ್ಪಟ್ಟಿವೆ. ಮಹಾಭಾರತವನ್ನು ಆಧರಿಸಿ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಾಜಕ್ರೀಡೆ, ತಣ್ಣಗಿನ ಬೆಂಕಿ, ಆಹುತಿ, ವಿಚಿತ್ರವೀರ‍್ಯ ಮೊದಲಾದವು ಅವುಗಳಲ್ಲಿ ಕೆಲವು. ಭೈರಪ್ಪನವರ ಪರ್ವದೊಂದಿಗೆ ಆ ಸಮಸ್ತ ಕೃತಿಗಳನ್ನೂ ಹೋಲಿಸಿದಾಗ ಅವು ಪರ್ವದಷ್ಟು ಜನಪ್ರಿಯವಾಗಿಲ್ಲದಿರುವುದೂ, ವಿಮರ್ಶಕರಿಂದ ಕೂಡ ತೃಣೀಕರಿಸಲ್ಪಟ್ಟಿರುವುದೂ ಕಂಡುಬರುತ್ತದೆ.


ಸತ್ಯಕಾಮರ ವೈಚಾರಿಕ ಸ್ಪಷ್ಟತೆ ಹಾಗೂ ಭಾಷೆಯ ಮೇಲಿನ ಪ್ರಭುತ್ವದ ಬಗೆಗೆ ಯಾವುದೇ ಕುಂದೆಣಿಸುವಂತಿಲ್ಲ. ಆದರೂ ಅವರ ಕಾದಂಬರಿಗಳು ಪರ್ವದಷ್ಟು ಜನಪ್ರಿಯವೂ, ಬಹುಚರ್ಚಿತವೂ ಆಗಲಿಲ್ಲವೇಕೆ? ಸಂಸ್ಕೃತಭೂಯಿಷ್ಠ ಭಾಷೆಯೂ, ಸೂತ್ರರೂಪದಂತಹ ಅವರ ಶೈಲಿಯೂ ಮುದಾವಹವೇ. ಕ್ರಿಯಾಪದ ರಹಿತವಾದ ಗೂಢವಾಕ್ಯಗಳನ್ನು ಅರ್ಥೈಸುವಲ್ಲಿ ತಿಣುಕುವುದು ಪ್ರೌಢ ಓದುಗನಿಗೆ ಖುಷಿ ನೀಡುವಂಥದೇ. ಆದರೆ ಅದು ಸಾಮಾನ್ಯ ಓದುಗರಿಗೆ ಕಬ್ಬಿಣದ ಕಡಲೆಯಂತಾಗುತ್ತದೆ. ಸತ್ಯಕಾಮರ ಭಾಷೆಯನ್ನು ಹಿಂಬಾಲಿಸುವಲ್ಲಿ ಓದುಗರಿಗೆ ವಿಶೇಷ ಪರಿಶ್ರಮದ ಅಗತ್ಯವಿದೆ.


ವಸ್ತು ಮತ್ತು ತಂತ್ರಗಳು ಒಂದೇ ಆಗಿದ್ದರೂ, ವೈಚಾರಿಕ ಸ್ಪಷ್ಟತೆ ಮತ್ತು ಭಾಷೆಯ ಮೇಲಿನ ಪ್ರಭುತ್ವ ಇದ್ದರೂ, ಕೇವಲ ಪಂಡಿತಗಮ್ಯವಾದ ಸತ್ಯಕಾಮರ ಭಾಷೆ ಹಾಗೂ ಪಾಮರಸುಲಭವಾದ ಭೈರಪ್ಪನವರ ಭಾಷೆಯೂ ಜನಪ್ರಿಯತೆಯಲ್ಲಿ ಈರ್ವರ ನಡುವಿನ ವ್ಯತ್ಯಾಸಕ್ಕೆ ಕಾರಣವಾಗಿದೆ.


ಇಂತಹುದೇ ಹೋಲಿಕೆಯನ್ನು ಯಶವಂತ ಚಿತ್ತಾಲರೊಂದಿಗೂ ಮಾಡಬಹುದು. ಚಿತ್ತಾಲರಂತೆಯೇ ಕರ್ನಾಟಕದಿಂದ ಬಹುಕಾಲ ಹೊರಗೇ ನೆಲೆಸಿದ್ದರೂ ಅನ್ಯಭಾಷೆಗಳ ಪ್ರಭಾವವು ಭೈರಪ್ಪನವರ ಕನ್ನಡದ ಮೇಲೆ ಅಷ್ಟಾಗಿ ಇಲ್ಲ ಏನು, ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಕಡಿಮೆ. ಸನ್ನಿವೇಶಕ್ಕನುಗುಣವಾಗಿ, ಪಾತ್ರಗಳಿಗೆ ತಕ್ಕುದಾಗಿ, ಹಿಂದೂಸ್ತಾನಿ ಸಂಗೀತದ ವಿವರಗಳ ಸಲುವಾಗಿಯಷ್ಟೇ ಮುಂಬೈಕರ್ನಾಟಕದ ಭಾಷೆಯನ್ನು ಬಳಸುತ್ತಾರೆ ಭೈರಪ್ಪ. ಆದರೆ ಚಿತ್ತಾಲರ ಮುಂಬೈಕನ್ನಡವು ಸರ್ವರಿಗೂ ಸುಲಭಗಮ್ಯವಲ್ಲವೆಂದು ತೋರುತ್ತದೆ. ಹೀಗಾಗಿ ಅವರ ಕಾದಂಬರಿಗಳು ವಿಮರ್ಶಕರಿಂದ ಮತ್ತು ಅಕೆಡಮಿಕ್ ಓದುಗವರ್ಗದಿಂದ ಮಾತ್ರ ಮನ್ನಣೆಗಳಿಸಿವೆಯೇನೋ!
ಕನ್ನಡವೇ ಆದರೂ, ಒಂದು ಬುಡಕಟ್ಟಿನ ಭಾಷೆಯೆಂಬಂತಹ ಗ್ರಾಮ್ಯದಲ್ಲಿ ಬರೆಯಲ್ಪಟ್ಟ ದೇವನೂರ ಮಹಾದೇವರ ಕುಸುಮಬಾಲೆ ಕೂಡ ಅನುಸರಿಸಲು ಕಷ್ಟದ್ದಾಗಿ ನನಗೆ ಕಾಣುತ್ತದೆ.
ಹೀಗೆ ಸಂಸ್ಕೃತಭೂಯಿಷ್ಠ, ಗ್ರಾಮ್ಯ, ಮಿಶ್ರಭಾಷಾ ಪ್ರಯೋಗಗಳಲ್ಲಿ ಭೈರಪ್ಪನವರ ಭಾಷಾಪ್ರಯೋಗವು ಸರ್ವಸುಲಭವೆನಿಸಿ, ಅವರ ವೈಶಿಷ್ಟ್ಯವಾಗಿ ಕಾಣುತ್ತದೆ.


ಇವರ ಆರಂಭಿಕ ಕಾದಂಬರಿಗಳಲ್ಲಿ ಹಲವಾರು ಅಪಶಬ್ದಪ್ರಯೋಗಗಳಿವೆ ಎಂದು ಬನ್ನಂಜೆ ಗೋವಿಂದಾಚಾರ‍್ಯರು ತಮ್ಮದೊಂದು ವಿಮರ್ಶೆಯಲ್ಲಿ ತೋರಿಸಿಕೊಟ್ಟಿದ್ದರು. ಸದ್ವಿಮರ್ಶೆಯ ಫಲರೂಪವಾಗಿ ನಂತರದ ಮುದ್ರಣಗಳಲ್ಲಿ ಅವುಗಳನ್ನು ಭೈರಪ್ಪನವರು ತಿದ್ದಿಕೊಂಡಿದ್ದಾರು. ಆದರೆ ನಂತರದ ಕಾದಂಬರಿಗಳಲ್ಲಿ ಅಂತಹ ವ್ಯಾಕರಣದೋಷಗಳನ್ನು ಗುರುತಿಸುವ ಅಗತ್ಯವೇ ಇಲ್ಲದಂತೆ ಕನ್ನಡವು ಪರಿವರ್ತನಶೀಲವಾಗಿದೆ.


ಹದವರಿತ ಭಾಷೆಯ ಬಳಕೆಯಂತೆಯೇ, ಓದುಗರನ್ನು ತೀವ್ರವಾಗಿ ಆಕರ್ಷಿಸಬಲ್ಲ, ಭಾವನಾತ್ಮಕವಾಗಿ ಆಪ್ತವಾಗುವ ಭೈರಪ್ಪನವರ ಕಥನತಂತ್ರವು ಅನನ್ಯವಲ್ಲದಿದ್ದರೂ ವಿಶಿಷ್ಟ.


ಆರಂಭಿಕ ಕಾದಂಬರಿಗಳಲ್ಲಿ ಉಪದೇಶದ ಧಾಟಿಯೂ, ವೈಚಾರಿಕ ಚಿಂತನೆಗಳನ್ನು ಹಸಿಹಸಿಯಾಗಿ ಅಳವಡಿಸಿರುವುದೂ ಕಾಣುತ್ತದೆ. ಆದರೆ ಜಲಪಾತದಿಂದ ಮೊನೋಲೋಗ್ ಅಂದರೆ ಸ್ವಗತ ರೀತಿಯ, ಆತ್ಮನಿರೀಕ್ಷಣೆಯ ಸ್ವರೂಪದ, ಪಾತ್ರಗಳ ಆಲೋಚನಾ ಲಹರಿಯ ಮೂಲಕವೇ ಕಥೆಯನ್ನು ನಿರೂಪಿಸುವ ತಂತ್ರವನ್ನು ಬಳಸಲಾರಂಭಿಸಿದಂದಿನಿಂದ ಭೈರಪ್ಪನವರು ಅದ್ಭುತವಾದ ಯಶಸ್ಸನ್ನು ಸಾಧಿಸಿದ್ದಾರೆ. ಪಾತ್ರಗಳ ಸಂಭಾಷಣೆಯ ಮೂಲಕ ಕಥೆಯನ್ನು ಹೇಳುವಾಗ ವಿಚಾರವು ಹೊರಗಿನಿಂದ ಹೇರಲ್ಪಟ್ಟಂತೆ ತೋರುತ್ತದೆ. ಆದರೆ ಲೇಖಕನು ಪ್ರತಿ ಪಾತ್ರವೂ ತಾನೇ ಆಗಿ, ಪರಕಾಯಪ್ರವೇಶ ಮಾಡಿದಂತೆ ಅನುಭವವನ್ನು ವಿವರಿಸುವಾಗ ವಿಚಾರವು ಪಾತ್ರದಿಂದ ಹೊರತಾಗಿ ತೋರುವುದಿಲ್ಲ. ಈ ಕಲೆಗಾರಿಕೆ ಭೈರಪ್ಪನವರ ವೈಶಿಷ್ಟ್ಯ. ಸತ್ಯಕಾಮರು ಕೂಡ ಇಂತಹುದೇ ತಂತ್ರವನ್ನು ಬಳಸಿದರೂ, ಕನ್ನಡದ ಮಟ್ಟಿಗೆ ಇದನ್ನು ಸಮರ್ಥವಾಗಿ ಬಳಸಿರುವುದು ಭೈರಪ್ಪನವರೇ ಅನಿಸುತ್ತದೆ.


ಆರಂಭದಲ್ಲೇ ಓದುಗರ ಮನಸ್ಸಿನಲ್ಲಿ ಕನಿಕರವನ್ನು ಉಂಟುಮಾಡುವ ಸನ್ನಿವೇಶಗಳನ್ನು ಅಳವಡಿಸುವುದು ಇವರ ಮತ್ತೊಂದು ತಂತ್ರ. ಇದರಿಂದ ಕಾದಂಬರಿಗಳಿಗೆ ಉತ್ತಮವಾದ ಓಪನಿಂಗ್ ಸಿಗುತ್ತದೆ. ಮೊದಲಿಗೇ ಇಂತಹ ಭಾವಜಾಲಕ್ಕೆ ಸಿಕ್ಕುಬೀಳುವ ಓದುಗನು ಕೊನೆಯವರೆಗೂ ಆಯಾ ಪಾತ್ರಗಳ ಮಾನಸಿಕ ದೋಲಾಂದೋಲಕ್ಕೆ ತನ್ನನ್ನು ಒಪ್ಪಿಸಿಕೊಂಡು ಬಿಡುತ್ತಾನೆ. ಅದು ತನ್ನದೇ ಅನುಭವವೋ, ತನ್ನ ಸುತ್ತಲೇ ನಡೆಯುತ್ತಿರುವ ಘಟನೆಯೋ ಎಂಬಂತೆ ತಾದಾತ್ಮ್ಯವನ್ನು ಹೊಂದುತ್ತಾನೆ. ಭಾವುಕತೆಯೊಂದಿಗೆ ಶಬ್ದಗಳ ಮೂಲಕ ಕ್ರೀಡಿಸುವ ಈ ತಂತ್ರ ಹೆಂಗರುಳಿನ ಓದುಗರನ್ನು ಆಕರ್ಷಿಸುವ ಮೂಲವಾಗಿದೆ.


ಉಪಕ್ರಮ-ಉಪಸಂಹಾರಗಳು ಸಂಗತವಾಗಿರಬೇಕೆನ್ನುವ ಶಾಸ್ತ್ರಲಕ್ಷಣ ಇವರ ಕಾದಂಬರಿಗಳಲ್ಲಿ ಎದ್ದು ಕಾಣುತ್ತದೆ. ಇದು ಪ್ರಜ್ಞಾಪೂರ್ವಕವಾಗಿ ಬಂದಿದೆಯೋ ಅಥವಾ ಅವರಿಗೇ ಅರಿವಿಲ್ಲದೆ ಸಾಧಿತವಾಗಿದೆಯೋ ಅವರೇ ಹೇಳಬೇಕು. ಈ ತಂತ್ರದ ಒಂದು ಲಾಭವೆಂದರೆ ನಾನಾ ವಿಧವಾದ ಆಲೋಚನಾಲಹರಿಗಳೂ ಅಂತಿಮವಾಗಿ ಪ್ರಧಾನ ಸೂತ್ರದ ಪರಿಧಿಯ ಒಳಗೇ ಅಳವಡುವುದು ಮತ್ತು ಬುದ್ಧಿಜೀವಿಜ್ಞಾನಪೀಠಿಗಳಿಗೆ ಪಿತ್ತ ನೆತ್ತಿಗೇರಿಸುವುದು!


ಇವರ ಬಹುತೇಕ ಕಾದಂಬರಿಗಳಲ್ಲಿ ಅನೈತಿಕ ಸಂಬಂಧಗಳು (ಹಾಗೆ ನಿಶ್ಚಯಿಸಬಹುದಾದರೆ!) ಸುತ್ತಿಸುಳಿದು ಸುತ್ತಿಸುಳಿದು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಆದರೆ ಇವರ ಕಥನಚಾತುರ‍್ಯ ಮತ್ತು ಅಂತಹ ಸನ್ನಿವೇಶಕ್ಕೆ ಕಾರಣವಾಗುವ ಅನೇಕ ಸಣ್ಣ ಸಣ್ಣ ಸಂಗತಿಗಳನ್ನು ಕಟ್ಟಿಕೊಡುವ ತಂತ್ರವು ಇಂತಹ ಅನೈತಿಕ ಸಂಬಂಧಗಳ ವರ್ಣನೆಯನ್ನು ಅಶ್ಲೀಲ ಅಥವಾ ಅತಿರೇಕ ಎನಿಸದಂತೆ ಮಾಡುತ್ತವೆ. ಕ್ವಚಿತ್ತಾಗಿ ಸಾಕ್ಷಿಯ ಮಂಜಯ್ಯ ಮತ್ತು ತಂತುವಿನ ಅನೂಪನಂತಹ ಪಾತ್ರಗಳು ಮಾತ್ರ ಇದಕ್ಕೆ ಅಪವಾದ ಎನ್ನಬಹುದು. ಇವುಗಳಲ್ಲಿ ಲಂಪಟತೆಯೇ ಪ್ರಧಾನ ಗುಣವಾಗಿದೆ. ಇಂತಹ ಸಂದರ್ಭಗಳಲ್ಲಿ ಮಾಸ್ತಿಯವರು ಸರಳ ಹಾಗೂ ನಿರ್ಲಿಪ್ತವಾಗಿ ಭಾಷೆಯನ್ನು ಬಳಸುವ ಹದ ಆದರ್ಶಪ್ರಾಯವಾಗಿದೆ. ಭೈರಪ್ಪನವರಿಗೆ ಅದು ಸಾಧ್ಯವಾಗಿಲ್ಲದಿರುವುದು, ಅವರು ಶೃಂಗಾರದ ಭಾವತೀವ್ರತೆಯಿಂದ ಓದುಗರನ್ನು ಕಟ್ಟಲೆಳೆಸುವ ತಂತ್ರದ ಮಿತಿಯೋ ಎಂಬ ಪ್ರಶ್ನೆ ಕಾಡುತ್ತದೆ.


ಆದರೂ ವ್ಯಭಿಚಾರವನ್ನೂ ಅಶ್ಲೀಲವೆನಿಸದಂತೆ ನಿರೂಪಿಸುವ ಅವರ ಚಾತುರ‍್ಯ ಮೆಚ್ಚಬೇಕಾದ್ದೇ. ಅಂಚು ಈ ದಿಸೆಯಲ್ಲಿ ಸಾಧಿಸಿರುವ ಸಾಫಲ್ಯ ಅನ್ಯಾದೃಶವಾದುದು. ಮೊದಲ ಓದಿಗೆ ಅದರಲ್ಲಿನ ಪುನರುಕ್ತ ಸನ್ನಿವೇಶಗಳು ಬೇಸರವೆನಿಸಿದರೂ ಪುನಃ ಪುನಃ ಓದುವಾಗ ಅವು ಓದುಗನನ್ನು ರಸಾನುಭವದಲ್ಲಿ ಮುಳುಗಿಸಿಕೊಳ್ಳುತ್ತವೆ. ಅಂಚುವಿನ ಸೋಮಶೇಖರನು ತಾನು ಮುಂಬೈಯಲ್ಲಿದ್ದಾಗ ಹೊಂದಿದ್ದಂತಹ ಸಂಬಂಧವನ್ನು ಅಮೃತಾಳೊಂದಿಗೆ ಹೇಳಿಕೊಂಡು ಅಪರಾಧೀಭಾವವನ್ನು ಕಳೆದುಕೊಂಡು, ನಂತರ ಅಮೃತಾಳಿಂದ ಕ್ಷಮಿಸಲ್ಪಡುವಾಗಲೇ ಓದುಗರಿಂದಲೂ ಕ್ಷಮಿಸಲ್ಪಟ್ಟಿರುತ್ತಾನೆ. ಉದ್ಘೋಷಣೆಯಿಂದ ಪಾಪನಿವೃತ್ತಿಯಾಗುತ್ತದೆ ಎಂಬ ಅವರದೇ ಬೇರೆಡೆಯ ಮಾತಿಗೆ ಇದು ಸಮರ್ಥ ಉದಾಹರಣ.


ಇಂತಹುದೇ ಪ್ರಸಂಗವನ್ನು ನೆಲೆಯಲ್ಲಿಯೂ ಕಾಣಬಹುದು. ನೆಲೆಯ ಕಾಳುಮಾವಯ್ಯ ತನ್ನ ದೈಹಿಕ ತೃಷೆಗಳನ್ನು ಅಲ್ಲಲ್ಲಿ ತೀರಿಸಿಕೊಂಡವನೇ. ಆದರೆ ಸಾಕ್ಷಿಯ ಮಂಜಯ್ಯನಂತೆ ಲಂಪಟನಲ್ಲ. ಇಂಥವರ ನಡುವಿನ ವ್ಯತ್ಯಾಸವನ್ನು ಕಟ್ಟಿಕೊಟ್ಟಿರುವಲ್ಲಿ ಭೈರಪ್ಪನವರ ಕಲೆಗಾರಿಕೆ ಎದ್ದು ಕಾಣುತ್ತದೆ. ಕಾಮವು ಅರಿಷಡ್ವರ್ಗಗಳಲ್ಲಿ ಒಂದಾಗಿರುವಂತೆಯೇ ಪುರುಷಾರ್ಥಗಳಲ್ಲೂ ಒಂದೆಂದು ಗಣಿಸಲ್ಪಟ್ಟಿದೆ. ಮಂಜಯ್ಯನ ಕಾಮವು ಅರಿಷಡ್ವರ್ಗಗಳ ಪ್ರತೀಕವಾಗಿ ವರ್ಜ್ಯವೆನಿಸಿದರೆ, ನಾಗಭಟ್ಟ ಮುಂತಾದವರ ಕಾಮವು ಪುರುಷಾರ್ಥಸಾಧಕವೂ ಆಗಬಹುದೆಂದು ತೋರುತ್ತದೆ.


ಹೀಗೆ ಅನೈತಿಕ ಸಂಬಂಧಗಳು, ಲೈಂಗಿಕ ತೃಷೆಗಳು ಇವರ ಕಾದಂಬರಿಗಳಲ್ಲಿ ವಿಜೃಂಭಿಸಲು ಕಾರಣವೇನು? ಐಹಿಕ ಪುರುಷಾರ್ಥ ತ್ರಯಗಳಲ್ಲಿ ಕಾಮವೇ ಉನ್ನತವಾದದ್ದು ಎಂಬ ನಿಲುವಿಗೆ ಲೇಖಕರು ಅಂಟಿದ್ದಾರೆಯೇ? ಇದ್ದರೂ ಅದನ್ನು ತಪ್ಪೆಂದು ಹೇಳುತ್ತಿಲ್ಲ. ಏಕೆಂದರೆ ಶೃಂಗಾರವು ಅಶ್ಲೀಲವಲ್ಲ. ಅದು ಪ್ರಕೃತಿ ಸಹಜವಾದದ್ದೇ.
ಭರ್ತೃಹರಿಯೇ ಹೇಳಿದ್ದಾನೆ..


ವಿಶ್ವಾಮಿತ್ರ ಪರಾಶರ ಪ್ರಭೃತಯೋ ವಾತಾಂಬುಪರ್ಣಾಶನಾಃ
ತೇಪಿ ಸ್ತ್ರೀಮುಖಪಂಕಜಂ ಸುಲಲಿತಂ ದೃಷ್ಟ್ವೈವ ಮೋಹಂ ಗತಾಃ |


ಶಾಲ್ಯನ್ನಂ ಸಘೃತಂ ಪಯೋದಧಿಯುತಂ ಯೇ ಭುಂಜತೇ ಮಾನವಾಃ
ತೇಷಾಮಿಂದ್ರಿಯನಿಗ್ರಹೋ ಯದಿ ಭವೇತ್ ವಿಂಧ್ಯಃ ಪ್ಲವೇತ್ ಸಾಗರೇ ||


ಕೇವಲ ಗಾಳಿ ನೀರು ಕಂದಮೂಲಗಳನ್ನು ತಿಂದುಕೊಂಡಿದ್ದ ವಿಶ್ವಾಮಿತ್ರ ಪರಾಶರ ಮೊದಲಾದ ಋಷಿಗಳೇ ಸುಂದರವಾದ ಹೆಣ್ಣಿನ ಮುಖದರ್ಶನ ಮಾತ್ರಕ್ಕೇ ಮೋಹವಶರಾದರು. ಇನ್ನು ಘಮಗುಡುವ ಬಾಸ್ಮತಿ ಅಕ್ಕಿಯ ತುಪ್ಪಾನ್ನ(ಪನೀರ್ ಹಾಕಿದ ಘೀರೈಸ್), ಕ್ಷೀರಾನ್ನ(ಕೇಸರಿ ಬಾದಾಮು ಕೂಡಿದ ಕಾಶ್ಮೀರಿ ಪುಲಾವ್), ದಧ್ಯನ್ನ(ದ್ರಾಕ್ಷಿ, ದಾಳಿಂಬೆ, ಗೋಡಂಬಿ ಹಾಕಿದ ಕರ್ಡ್‌ರೈಸ್)ಗಳನ್ನು ಮೆಲ್ಲುವ ಸುಖಲೋಲುಪರಾದ ಹುಲು ಮಾನವರಿಗೆ ಇಂದ್ರಿಯ ನಿಗ್ರಹವು ಒಂದೊಮ್ಮೆ ಸಾಧ್ಯವಾಗಿಬಿಟ್ಟರೆ, ಅಹೋ! ಆ ವಿಂಧ್ಯ ಪರ್ವತವು ಸಮುದ್ರದಲ್ಲಿ ತೇಲುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾನೆ ಭರ್ತೃಹರಿ. ಹಾಗಾಗಿ ಒತ್ತಾಯಪೂರ‍್ವಕವಾದ ಇಂದ್ರಿಯನಿಗ್ರಹವು ನಮ್ಮಂತಹ ಸಾಮಾನ್ಯರಿಗೆ ವಿಧಿತವಲ್ಲ.


ಅಷ್ಟೇ ಅಲ್ಲ, ಅನೈತಿಕ ಸಂಬಂಧ ಎಂಬ ಕಲ್ಪನೆ ಒಡಮೂಡಿದ್ದೇ ವಿವಾಹ ವ್ಯವಸ್ಥೆಯನ್ನು ಏರ್ಪಡಿಸಿದ ನಂತರ. ಶ್ವೇತಕೇತುವು ಈ ವಿವಾಹ ವ್ಯವಸ್ಥೆಯ ಪ್ರವರ್ತಕನೆಂದು ಕಾಮಸೂತ್ರದ ವ್ಯಾಖ್ಯಾನವಾದ ಜಯಮಂಗಲಾದಿಂದ ತಿಳಿದುಬರುತ್ತದೆ. ಅಂದರೆ ಅದಕ್ಕೆ ಪೂರ್ವದಲ್ಲಿ ಸ್ವರ್ಗಸದೃಶವಾದ ಮುಕ್ತ ವ್ಯವಸ್ಥೆಯೇ ಇದ್ದಿತೆಂದು ಭಾವಿಸಬಹುದು. ಯೌಧೇಯರಲ್ಲಿ ಇಂತಹ ಪದ್ಧತಿ ಇದ್ದಿತೆಂದು ರಾಹುಲ ಸಾಂಕೃತ್ಯಾಯನರು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಹಿಮಾಲದ ತಪ್ಪಲಿನ ಹಳ್ಳಿಗಳಲ್ಲಿ ಬಹುಪತಿತ್ವವೂ, ಅತಿಥಿಗಳಿಗೆ ಸತ್ಕಾರದಲ್ಲಿ ಶಯನಸುಖವನ್ನು ಕೂಡ ಒದಗಿಸುವ ಪದ್ಧತಿಯೂ ತೀರ ಇತ್ತೀಚಿನವರೆಗೂ ಇದ್ದಿತೆಂದು ಭೈರಪ್ಪನವರ ಪ್ರತ್ಯಕ್ಷಾನುಭವಕ್ಕೆ ಬಂದಿರುವುದರಿಂದ ಅವರು ನಮ್ಮನ್ನು ಮತ್ತೆ ಅಂತಹ ವ್ಯವಸ್ಥೆಯತ್ತ ಒಯ್ಯಲು ಉತ್ಸುಕರಾಗಿದ್ದಾರೋ? ಸಂತೋಷವೇ. ನಾವು ಕಾಮವನ್ನು ಒಂದು ಶಾಸ್ತ್ರವಾಗಿಯೇ ಪರಿಗಣಿಸಿರುವಾಗ, ಶಾಸ್ತ್ರದಲ್ಲಿ ಪರಿಣತರಾಗುವುದೂ, ಶಾಸ್ತ್ರದ ವ್ಯಾಪಕತ್ವವನ್ನು ಅವಕಾಶವಾದ ಎಡೆಗಳಲ್ಲೆಲ್ಲಾ ಪುನಃ ಪುನಃ ಪರೀಕ್ಷಿಸುವುದೂ ತಪ್ಪಾಗಲಾರದು.


ಸ್ತ್ರೀ ಪಾತ್ರಗಳ ಅಂತರಂಗವನ್ನು ತೆರೆದಿಡುವುದು ಓದುಗರಿಗೆ ಆಪ್ತವಾಗುವ ಇವರ ತಂತ್ರಗಳಲ್ಲಿ ಇನ್ನೊಂದು. ಹೆಂಗಸು ಗಂಡಸಿಗೆ ಎಂದೆಂದಿಗೂ ಒಂದು ಮಹಾ ರಹಸ್ಯವೇ. ಹಾಗೆಯೇ ಹೆಂಗಸಿಗೂ ಕೂಡ ! ಹಾಗಾಗಿ ಹೆಣ್ಣಿನ ಅಂತರಂಗದ ವಿಸ್ತೃತ ನಿರೂಪಣೆಯ ಈರ್ವರಿಗೂ ಆಪ್ತವಾಗುವಂತಹುದೇ. ಇಷ್ಟಾಗಿಯೂ ಪುರುಷ ಲೇಖಕರಿಂದ ಸ್ತ್ರೀ ಪಾತ್ರಗಳ ಶೋಷಣೆ ನಡೆದಿದೆ ಎಂದು ಇತ್ತೀಚೆಗೆ ಶ್ರೀಮತಿ ಗೀತಾ ನಾಗಭೂಷಣರು ಭೈರಪ್ಪನವರನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಆಕ್ಷೇಪಿಸಿರುವುದು ಆಶ್ಚರ‍್ಯಕರವಾಗಿದೆ.


ಜಲಪಾತಕ್ಕಿಂತ ಹಿಂದಿನ ಕಾದಂಬರಿಗಳವರೆಗೂ ಭೈರಪ್ಪನವರು ನಾಯಕಪ್ರಧಾನವಾಗಿಯೇ ಬರೆದಿದ್ದಾರೆಂದರೆ ಅರೆಮನಸ್ಸಿನಿಂದ ಒಪ್ಪಿಕೊಳ್ಳಬಹುದೇನೋ. ಆದರೆ ನಂತರದ ಅವರ ಕಾದಂಬರಿಗಳಲ್ಲಿ ನೆನಪುಳಿಯುವ ಪಾತ್ರಗಳೆಂದರೆ ಸ್ತ್ರೀ ಪಾತ್ರಗಳೇ. ಸಾರ್ಥದ ನಾಗಭಟ್ಟನಿಗಿಂತಲೂ ಚಂದ್ರಿಕೆ ಓದುಗನನ್ನು ಬಹಳಕಾಲ ಕಾಡುತ್ತಾಳೆ. ಅಂಚುವಿನ ಅಮೃತಾ, ಮಂದ್ರದ ಮಧುಮಿತಾ, ಗೃಹಭಂಗದ ನಂಜಮ್ಮ ಇಂತಹ ಪಾತ್ರಗಳನ್ನು ಮತ್ತಾವ ಲೇಖಕಿಯರೂ ಸೃಷ್ಟಿಸಿಲ್ಲದಿರುವುದು, ಶ್ರೀಮತಿ ಗೀತಾನಾಗಭೂಷಣರು ಇದನ್ನೊಂದು ಪಂಥವಾಗಿ ಸ್ವೀಕರಿಸಿ ಸೃಷ್ಟಿಸಬಹುದಾದ ಅವಕಾಶವಾಗಿದೆ.


ಭೈರಪ್ಪನವರ ಕಾದಂಬರಿಗಳಲ್ಲಿ ಹಲವು ಸನ್ನಿವೇಶಗಳು ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ಕಾರಾಗೃಹದಲ್ಲಿ ಬಂಧಿಯಾಗಿ ಶೌಚ ಸಮಸ್ಯೆಯನ್ನು ಎದುರಿಸುವ ಪ್ರಸಂಗವು ಸಾರ್ಥದಲ್ಲಿ, ಅನ್ವೇಷಣದಲ್ಲಿ, ಭಿತ್ತಿಯಲ್ಲಿ, ತಂತುವಿನಲ್ಲಿ ಮತ್ತೆ ಮತ್ತೆ ಬರುತ್ತದೆ. ಸಾರ್ಥದಲ್ಲಿ ಇದು ಸ್ವಲ್ಪ ಕೃತಕವಾಗಿ ಕಾಣುತ್ತದೆ. ತಾಂತ್ರಿಕ ಸಾಧನೆಗಳನ್ನು ಮಾಡಿದಂತಹ ನಾಗಭಟ್ಟನು ಪ್ರತೀಹಾರಿಗಳ ಎದುರು ವಿಸರ್ಜನೆಗೆ ನಾಚಿಕೊಳ್ಳುವುದು ಆಶ್ಚರ‍್ಯ ತರುತ್ತದೆ. ಹೆಣ್ಣಿನ ನಗ್ನ ಶರೀರದ ಸೌಷ್ಠವವನ್ನು ಅವಳಿದಿರೇ ವರ್ಣಿಸುವ ಪ್ರಸಂಗ ಕೂಡ ಸಾರ್ಥ ಮತ್ತು ತಂತುಗಳಲ್ಲಿ ಬರುತ್ತದೆಯಾದರೂ ಭಾಷಿಕ ನಿರೂಪಣೆಯು ವ್ಯತ್ಯಸ್ತಗೊಳ್ಳುವುದನ್ನು ಓದುಗರು ಗಮನಿಸಬಹುದು.


ಆವರಣದ ಪ್ರೊಫೆಸರ್ ಶಾಸ್ತ್ರಿಯ ಪಾತ್ರವು ಯಾವುದೋ ಒಂದು ಸಮಕಾಲೀನ ವ್ಯಕ್ತಿಯನ್ನು ಹೋಲುತ್ತದೆ ಎಂಬ ಊಹೆಗಳು ಬ್ಲಾಗ್‌ಗಳಲ್ಲಿ ಸಾಕಷ್ಟು ಪ್ರಚಲಿತವಾಗಿವೆ. ಆದರೆ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ಬರೆದಿರುವ ನನ್ನ ತೇಜಸ್ವಿ ಎಂಬ ಪುಸ್ತಕದ ೧೭ನೆಯ ಪುಟದಲ್ಲಿ ಇಂತಹ ಊಹಾಪೋಹಗಳಿಗೆ ಪೂರಕವಾದ ಪ್ರಬಲ ಸಾಕ್ಷಿ ದೊರಕುತ್ತದೆ.


ಇವರಿಗೆ ಹೊಸ ಓದುಗರು ಸೃಷ್ಟಿಯಾಗುತ್ತಿಲ್ಲ ಎಂಬ ಸಮಸ್ಯೆ ಕಾಡುತ್ತಿದೆಯಂತೆ. ಇದು ಅರ್ಧಸತ್ಯ. ಹೊಸ ಪೀಳಿಗೆಯ ಮಹಿಳಾ ಓದುಗರು ಕಂಡುಬರುತ್ತಿಲ್ಲವೇ ವಿನಾ, ಭಾರತೀಯ ಪರಂಪರೆಯ ಬಗೆಗೆ ಆಸಕ್ತಿಯುಳ್ಳ ಯುವ ಓದುಗರು ಇದ್ದೇ ಇದ್ದಾರೆ. ಮತ್ತು ಅಂತಹ ಓದುಗರನ್ನು ಉತ್ಸಾಹಿಸುವ ಪ್ರಕ್ರಿಯೆ ಇವರ ಹಳೆಯ ಅಭಿಮಾನಿಗಳಿಂದಲೇ ಆಗಬೇಕಾದ ಕರ್ತವ್ಯ ಎಂದು ನಾನು ಭಾವಿಸುತ್ತೇನೆ.


ಅಂತಿಮವಾಗಿ ಭೈರಪ್ಪನವರ ಬಗೆಗೆ ನನ್ನ ಆಕ್ಷೇಪವೊಂದೇ. ಬೌದ್ಧಿಕ ಸಾಹಚರ‍್ಯೆಯ ಅತ್ಯುತ್ಕೃಷ್ಟ ಉದಾಹರಣಗಳಾದ ಚಂದ್ರಿಕೆ, ಅಮೃತಾ, ಮಧುಮಿತಾಳಂತಹ ಆದರ್ಶ ಪ್ರತಿಮೆಗಳನ್ನು ವಾಸ್ತವದಲ್ಲಿ ಹುಡುಕ ಹೊರಟಾಗ ಪುರುಷನು ಪಡೆಯುವ ಸೋಲು, ಅವನ ಧೃತಿಗೆಡಿಸಿ ನಿರಾಶೆಯ ಕೂಪಕ್ಕೆ ತಳ್ಳುತ್ತದೆ. ಅದಕ್ಕೆ ಇವರೇನಾದರೂ ಪರಿಹಾರ ಇಟ್ಟಿದ್ದಾರೋ?


ಸಾಹಿತ್ಯದ ಲಕ್ಷಣ, ಧ್ವನಿ, ರಸ, ಗುಣಾವಗುಣಗಳ ಬಗೆಗೆ ಭಟ್ಟತೌತ, ಲೊಲ್ಲಟ, ವಾಗ್ಭಟಾದಿ ಆನಂದವರ್ಧನ ಅಭಿನವಗುಪ್ತರು ಏನಾದರೂ ಹೇಳಿಕೊಳ್ಳಲಿ, ಆಧುನಿಕ ವಿಮರ್ಶಕರು ಭೈರಪ್ಪನವರ ಕಾದಂಬರಿಗಳ ಬಗೆಗೆ ಕುಠಾರವನ್ನು ಹಿಡಿದು ನಿರಂತರ ಟೀಕಾಪ್ರಹಾರ ಮಾಡುತ್ತಿರಲಿ, ನನ್ನಂತಹ ಸಾಮಾನ್ಯ ಓದುಗನಿಗೆ ಬೇಕಾಗುವ ರಸೋದ್ದೀಪ್ತಿಯನ್ನು ಅವರ ಕಾದಂಬರಿಗಳು ನೀಡುತ್ತವೆ. ಅದನ್ನು ಅನುಭವಿಸೋಣ.


ಆರಂಭದಲ್ಲಿ ಉದ್ಧರಿಸಿದ ಉಮರ ಖಯ್ಯಮ ಮತ್ತು ಭರ್ತೃಹರಿಗಳ ಮಾತಿಗೆ ಮತ್ತೆ ಬರೋಣ. ಮಾನವನ ಐಹಿಕ ಆವಶ್ಯಕತೆಗಳಾದ ಸಂಗೀತ, ಸಾಹಿತ್ಯ ಮತ್ತು ಭಿನ್ನಲಿಂಗಿಗಳ ಸಾಂಗತ್ಯ ಇವೆಲ್ಲವನ್ನೂ ತಮ್ಮ ಕಾದಂಬರಿಗಳಲ್ಲಿ ಸೇರಿಸಿ ರಸಪಾಕವನ್ನು ಸಿದ್ಧಪಡಿಸಿ ನೀಡುವ ಮಹಾ ಪಾಕಶಾಸ್ತ್ರಿ ಈ ಭೈರಪ್ಪ. ಭಾಷೆಯ ಮೂಲಕ ವಿಚಾರದ ಸಂವಹನದಲ್ಲಿ ಸಂಗೀತದ ಹದವನ್ನು ಮುಟ್ಟಿರುವ ಅವರ ಕಾದಂಬರಿಯೊಂದು ಕೈಯಲ್ಲಿದ್ದರೆ ಭಿನ್ನಲಿಂಗಿಯ ಸಾಂಗತ್ಯದ ಅಪೇಕ್ಷೆಯೂ ಸುಳಿಯದಂತೆ ಆವರಿಸಿಕೊಳ್ಳುವ ಇವರಿಗೆ ರಸಾಭಿಜ್ಞರಾದ ಓದುಗರು ಕೃತಜ್ಞರಾಗಿಲ್ಲದಿರುವುದು ಹೇಗೆ?


ಜೀವನಾನುಭವತ್ವೇನ ಶ್ರುತ್ಯರ್ಥಾಃ ಯೇನ ವಿಸ್ತೃತಾಃ |


ನೈಜಸಂಸ್ಕಾರ ಕರ್ತಾರಂ ಭೈರಪ್ಪಂ ತಂ ನಮಾಮ್ಯಹಮ್ ||


ನೈಜ ಸಂಸ್ಕಾರ ಕರ್ತಾರ ಎನ್ನುವಲ್ಲಿ ಓದುಗರಿಗೆ ಬೇರೇನಾದರೂ ಅರ್ಥಬೋಧೆಯಾದರೆ ಅದಕ್ಕೆ ನಾನು ಬಾಧ್ಯನಲ್ಲ.
*****


[೧೦-೦೫-೨೦೧೧ ರಂದು ಮೇಲುಕೋಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕವು ಆಯೋಜಿಸಿದ್ದ ಭೈರಪ್ಪನವರ ಕೃತಿಗಳ ಕುರಿತ ವಿದ್ವನ್ನಿಕಷ ಎಂಬ ವಿಚಾರಗೋಷ್ಠಿಯಲ್ಲಿ ಮಂಡಿಸಿದ ಪ್ರಬಂಧ.]


 ಎಸ್ ಎನ್ ಸಿಂಹ, # ೨೮೫, ಉಪ್ಪುನೀರು ಭಾವಿ ಬೀದಿ, ಮೇಲುಕೋಟೆ  ೫೭೧೪೩೧.
 - Ph: 94489 13269, 99458 55682. e-mail: simhasn3@gmail.com




byrappa function @ melkote

ಪತ್ರಿಕಾ ವರದಿ..

byrappa function @ melkote

ರಜಃ ಪೂತಮಿದಂ ಗೃಹಂ... ನನ್ನ ಮನೆಯಲ್ಲಿ...

byrappa function @ melkote

ದೋಸೆಯ ಆಸ್ವಾದದಲ್ಲಿ..

byrappa function @ melkote

ಸನ್ಮಾನ ಸ್ವೀಕಾರ..

byrappa function @ melkote

ಸಂವಾದದಲ್ಲಿ ಪಾಲ್ಗೊಂಡವರು: ನಾಗರತ್ನ ಹೆಮ್ಮಿಗೆ, ಎಸ್ ಎನ್ ಶ್ರೀನಿವಾಸನ್, ಕೆ ವಿ ಬಾಲಾಜಿ, ರಾ ಗಣೇಶ್, 
ಎಸ್ ಎನ್ ಸಿಂಹ, ಭೈರಪ್ಪ, ಮುಕುಂದನ್, ಆರ್ ಕೆ ನಾರಾಯಣ್, ಸಂಪತ್ಕುಮಾರ್, ತಿರುಮಲೈ.. 

byrappa function @ melkote

ವಿದ್ವನ್ನಿಕಷದಲ್ಲಿ ಶತಾವಧಾನಿ ಗಣೇಶ್, ಭೈರಪ್ಪ, ಅರೈಯರ್ ಶ್ರೀರಾಮ ಶರ್ಮ... 

Monday, May 2, 2011

symposium on byrappa at melkote on 10 may 2011

ಪ್ರಿಯರೆ,
ಇದುವರೆಗೂ ಪಂಡಿತರು ಅಷ್ಟಾದಶ ಲಕ್ಷಣಗಳಿಂದ ಕೂಡಿದ ಪ್ರಾಚೀನ ಕಾವ್ಯಗಳನ್ನು ಮಾತ್ರವೇ ತಮ್ಮ ವಿದ್ವತ್ತಿನ ಒರೆಗಲ್ಲಿಗೆ ಉಜ್ಜಿ ಪರೀಕ್ಷಿಸುತ್ತಿದ್ದರು. ಆದರೆ ಇಂದು ಅವರು ಆಧುನಿಕರಾದ ಭೈರಪ್ಪನವರ ಕಾದಂಬರಿಗಳನ್ನು ತಮ್ಮ ವಿದ್ವನ್ನಿಕಷಕ್ಕೆ ಉಜ್ಜಿ ಪರಾಮರ್ಶಿಸಲು ಹೊರಟಿದ್ದಾರೆ. ಅಗಾಧವಾದ ಗುರುತ್ವವಿರುವಲ್ಲಿ ಬೆಳಕು ಕೂಡ ಬಾಗುವಂತೆ ಪ್ರ ಗಾಢ ಚಿಂತನೆ ಇರುವಲ್ಲಿಗೆ ಪಂಡಿತರ ಚಿತ್ತ ಹರಿಯುವುದರಲ್ಲಿ ಅಚ್ಚರಿಯೇನಿದೆ ! 
ಸಾಹಿತ್ಯಾಸಕ್ತರಿಗೆ ಸ್ವಾಗತ...