Tuesday, November 27, 2012

ಧನ್ಯಂ ಗೃಹಸ್ಥಾಶ್ರಮಂ !


ಮೋದಂ ನೀಳ್ಪ ಗೃಹಂ, ಪ್ರಬುದ್ಧ ತನಯರ್, ಕಾಂತೆ ಪ್ರಿಯಂ ಪೇಳ್ವಳಾ
ಮೋದಕ್ಕಾಗೆ ಧನಂ, ರತಿಯಿನಿಯಳೊಳ್, ತನ್ನಾಜ್ಞೆ ಕೇಳ್ವಾಳುಗಳ್ |
ಆತಿಥ್ಯಂ ಹರಿಪೂಜನಂ ಮನೆಯೊಳಾ ಮಿಷ್ಟಾನ್ನಪಾನಂ ಸದಾ
ಸಾಧೂಸಂಘದುಪಾಸನಂ ನಡೆದಿರಲ್, ಧನ್ಯಂ ಗೃಹಸ್ಥಾಶ್ರಮಮ್ ||
                         
                                                                        15-02-2004

ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಪ್ರಿಯಾಲಾಪಿನೀ
ಚೇಷ್ಟಾಪೂರ್ತಿಧನಂ ಸ್ವಯೋಷಿತರತಿಃ ಸ್ವಾಜ್ಞಾಪರಾ ಸೇವಕಾಃ |
ಆತಿಥ್ಯಂ ಹರಿಪೂಜನಂ ಚ ಸತತಂ ಮೃಷ್ಟಾನ್ನಪಾನಂ ಗೃಹೇ
ಸಾಧೋಸ್ಸಂಗಮುಪಾಸತೇ ಚ ಸತತಂ ಧನ್ಯೋ ಗೃಹಸ್ಥಾಶ್ರಮಃ ||

Thursday, July 12, 2012

ಸಣ್ಣ ಕಥೆ - ಅಯೋಮಯ



ಅಯೋಮಯ

ಅದೆಷ್ಟೋ ವರ್ಷಗಳ ತಪನೆಯ ನಂತರ ಅವನಿಗೆ ಮದುವೆಯಾಯಿತು.
ಅದೆಷ್ಟೆಷ್ಟೋ ಹರಕೆಗಳನ್ನು ಹೊತ್ತಮೇಲೆ ಒಂದು ಮಗುವಾಯಿತು.
ತನ್ನ ವಂಶವೃಕ್ಷವನ್ನು ಮುಂದುವರೆಸುವ ಗಂಡಾಗಲಿಲ್ಲವೆಂಬುದು ಒಂದು ಕ್ಷಣಿಕ ಕೊರಗು ಅಷ್ಟೇ !
ತನ್ನೆಲ್ಲ ಪ್ರೀತಿಯನ್ನೂ ಧಾರೆಯೆರೆದು ಆ ಮಗುವನ್ನು ಬೆಳೆಸಿದ. 

ಅವಳ ಆರೋಗ್ಯ ಕೆಟ್ಟಾಗ ಅಮ್ಮನಿಗಿಂತ ಹೆಚ್ಚಾಗಿ ಆರೈಕೆ ಮಾಡಿದ.
ಕಕ್ಕುಲತೆಯಿಂದ ಕಾಳಜಿ ಮಾಡಿದ.
ಅವಳ ಯಾವ ಬೇಡಿಕೆಗೂ ಇಲ್ಲವೆನ್ನದೆ ಎಲ್ಲ ಅಗತ್ಯಗಳನ್ನೂ ಪೂರೈಸಿದ.
ಪ್ರೀತಿ ಹರಿಸುವುದರಲ್ಲಿ ದಂಪತಿಗಳಲ್ಲೇ ಪೈಪೋಟಿ !

ಅಂಥ ಪ್ರೀತಿಯ ಮಹಾಪೂರದಲ್ಲಿ ಯಾವುದಕ್ಕೂ ಕೊರತೆಯಿಲ್ಲದೆ ಬೆಳೆದ ಅವಳೀಗ 9 ನೇ ಕ್ಲಾಸು.
ಒಂದು ದಿನ ಅವನಿಗೆ ತುರ್ತಾಗಿ ರಬ್ಬರು ಬೇಕಾಯಿತು. 
ಮಗಳು ಆಡಲು ಹೊರ ಹೋಗಿದ್ದಾಳೆ.
ಅವಳ ಸ್ಕೂಲು ಬ್ಯಾಗಿಗೆ ಕೈ ಹಾಕಿ ಜ್ಯಾಮಿತಿ ಬಾಕ್ಸ್ ತೆಗೆದುಕೊಂಡ.

ಘಮ್ಮಗೆ ಸ್ಟ್ರಾಬೆರಿ ಹಣ್ಣಿನ ವಾಸನೆ ಬರುತ್ತಿದೆ !
ಗುಡ್ ! ಒಳ್ಳೆಯ ಫ್ಲೇವರಿನ ರಬ್ಬರ್ ತಗೊಂಡಿದಾಳೆ ತನ್ನ ಮಗಳು ಎಂದು ಮನಸ್ಸಿನಲ್ಲೇ ಬೀಗುತ್ತಾ
ಬಾಕ್ಸ್ ಓಪನ್ ಮಾಡಿದವನೇ..,
ದಿಗ್ಭ್ರಾಂತನಂತೆ ನಿಂತುಬಿಟ್ಟ !

ಅಲ್ಲಿದ್ದುದು ಮೂರ್ನಾಲ್ಕು ಕಾಂಡೋಂ ಪ್ಯಾಕೆಟ್ಗಳು !
9 ನೇ ಕ್ಲಾಸಿನ ಹುಡುಗಿಯ ಬ್ಯಾಗಿನಲ್ಲಿ !
ಮಗಳ ಹತ್ತಿರ ಅವು ಸಿಕ್ಕಿದ್ದಕ್ಕಾಗಿ ದುಃಖ ಪಡಬೇಕೋ ! ಅಥವಾ
ಈ ವಯಸ್ಸಿಗೇ ಅದನ್ನು ಬಳಸುವ ತಿಳುವಳಿಕೆ ಬಂದುದಕ್ಕೆ ಸಂತೋಷ ಪಡಬೇಕೋ !

ಅವನಿಗೆ ತಿಳಿಯಲಿಲ್ಲ..,
ಅಯೋಮಯನಾಗಿ ನಿಂತುಬಿಟ್ಟ !

*****

02-07-2012 - ಎಸ್ ಎನ್ ಸಿಂಹ, ಮೇಲುಕೋಟೆ. 

Wednesday, July 11, 2012

ಸಣ್ಣ ಕಥೆ - ಜೇಡಗಳು



ಜೇಡಗಳು

ಜೇನುನೊಣಗಳಿಗೆ ಜೇಡಗಳನ್ನು ಕಂಡರೆ ತುಂಬ ಅಸೂಯೆ. ತಾವು ಅಹೋರಾತ್ರಿ ಶ್ರಮಿಸಿ, ಕೋಟ್ಯಂತರ ಹೂಗಳ ಎದೆ ಬಗೆದು ಜೇನು ಸಂಗ್ರಹಿಸಬೇಕು ! ಅದನ್ನು ಕೂಡ ಯಾರು ಯಾರೋ ದುರುಳರು ದೋಚಿಬಿಡುತ್ತಾರೆ. ಉಳಿದದ್ದಕ್ಕೆ ಮೃಗೀಯ ಸರಕಾರ ಬೆಂಬಲ ಬೆಲೆ ಘೋಷಿಸಿದರೂ, ಅದೂ ಕೂಡ ಮಧ್ಯವರ್ತಿಗಳ ಪಾಲಾಗುತ್ತದೆ. ಈ ಜೇಡಗಳ ಸುಕೃತ ನೋಡಿ ! ಕೊಂಚವೇ ಶ್ರಮವಹಿಸಿ ಒಂದು ಚಂದದ ಬಲೆ ಹೆಣೆದು, ತಪಸ್ಸಿಗೆ ಕುಳಿತಂತೆ ಒಂದು ಮೂಲೆಯಲ್ಲಿ ಕುಳಿತುಬಿಟ್ಟರೆ ಸಾಕು. ಕೀಟಗಳು ತಾವಾಗಿಯೇ ಬಂದು ಆಹಾರವಾಗುತ್ತವೆ ! ನಾವು ಮಾತ್ರ ಏಕೆ ಅನ್ಯರ ಸಲುವಾಗಿ ದುಡಿಯಬೇಕು ? ನಾವೂ ಈ ಬಲೆ ಹೆಣೆಯುವ ಕಲೆ ಕಲಿತು ನೆಮ್ಮದಿಯಾಗಿ ಬಾಳಬಾರದೇಕೆ ಎಂದು ಯೋಚಿಸಿದವು ಜೇನುನೊಣಗಳು !


ಈ ಆಲೋಚನೆಗಳ ಪರಿಕ್ರಮವೇ ವಿಶಿಷ್ಟ. ಶರಭ ಸಂಹಿತೆಯ ಪ್ರಕಾರ, ಜಗತ್ತಿನಲ್ಲಿ ಒಂದೇ ತೆರನಾದ ಆಲೋಚನೆಗಳು ಏಕಕಾಲದಲ್ಲಿ ಹಲವರ ಮಿದುಳಿನಲ್ಲಿ ಮೂಡುತ್ತವೆ. ನ್ಯೂಟನ್ ಮತ್ತು ಲೈಬ್ನಿಟ್ಸರಿಗೆ ಕ್ಯಾಲ್ಕ್ಯುಲಸ್ಸಿನ ತತ್ತ್ವಗಳು ಸಮಾನಕಾಲದಲ್ಲಿ ಸ್ಫುರಿಸಿದ ಹಾಗೆ. ಅಳಿವು ಉಳಿವಿನ ಪ್ರಶ್ನೆ ಎದುರಾದಾಗಲಂತೂ ಈ ಸಾರ್ವತ್ರಿಕ ಏಕಾಲೋಚನೆಯ ಪ್ರಮಾಣ ಬಹಳ ಹೆಚ್ಚಾಗುತ್ತದೆ. ಸಾಂಕ್ರಾಮಿಕ ಆಕಳಿಕೆಯ ಹಾಗೆ !


ಹಾಗಾಗಿ ಜಗತ್ತಿನ ನಾನಾ ಜಾತಿಯ ಕೀಟಗಳಿಗೂ ಇಂತಹುದೇ ಸ್ಫುರಣೆ ಏಕಕಾಲದಲ್ಲಿ ಉಂಟಾಗಿರಲಿಕ್ಕೆ ಸಾಕು !


ಇದೇ ಹೊತ್ತಿಗೆ ಜಾಗತೀಕರಣದ ಪ್ರಭಾವದಿಂದಲೋ ಅಥವಾ ಬಲೆ ಹೆಣೆವ ಕೌಶಲ ರೂಢಿಸಿಕೊಂಡ ಅನ್ಯಜಾತಿಯ ಕೀಟಗಳ ಪೈಪೋಟಿಯಿಂದಲೋ, ನಿಜವಾದ ಜೇಡಗಳು ಜಾಲಸಂರಚನೆಯ ಸೂಕ್ಷ್ಮಗಳನ್ನೇ ಮರೆಯುತ್ತ ಬಂದವು ! ಸಂಸ್ಕಾರ ವಶಾತ್ ಎಲ್ಲೋ ಕೆಲವು ಜೇಡಗಳು ಜಾಲರಚನೆಯ ಮೂಲತತ್ತ್ವಗಳನ್ನು ಉಳಿಸಿಕೊಂಡು, ಸಮೃದ್ಧವಲ್ಲದಿದ್ದರೂ ಆಗೀಗ ದೊರೆಯುವ ಅಲ್ಪಾಹಾರದಲ್ಲೇ ಸಂತೃಪ್ತವಾಗಿ ಜೀವಿಸತೊಡಗಿದವು. ಇನ್ನು ಕೆಲವು ಜೇಡಗಳು, ಪ್ರಾದೇಶಿಕ ಸಂಕುಚಿತತೆಗಳನ್ನು ತ್ಯಜಿಸಿ, ವಿಶ್ವವ್ಯಾಪೀಜಾಲ ( www ವರ್ಲ್ಡ್ ವೈಡ್ ವೆಬ್) ನೊಡನೆ ಮಿಳಿತಗೊಂಡು ಗಳಿಸುವ ಬದಲಾವಣೆಗೆ ಒಗ್ಗಿಕೊಂಡು ಸಮೃದ್ಧವಾಗಿ ಜೀವಿಸತೊಡಗಿದವು.


ಜೇಡಗಳನ್ನು ಟೀಕಿಸುತ್ತಲೇ, ಅವುಗಳ ಬಲೆ ಹೆಣೆವ ಕೌಶಲವನ್ನು ರೂಢಿಸಿಕೊಂಡ ಅನ್ಯಜಾತಿಯ ಕೀಟಗಳು, ಜೇಡಗಳಂತೆಯೇ ಬದುಕತೊಡಗಿದರೂ, ನೂತನ ಮೃಗೀಯಸಂವಿಧಾನದ ಪ್ರಕಾರ ತಂತಮ್ಮ ಜಾತಿಗೆ ಲಭ್ಯವಾಗುವ ಮೀಸಲುಗಳನ್ನು ಕೂಡ ಉಪಯೋಗಿಸಿಕೊಂಡು ಬಹುಧಾ ಲಾಭದಿಂದ ಕೊಬ್ಬಿದವು. ಏತನ್ಮಧ್ಯೆ ಕಿಸ್ಕಾನ್ ಎಂಬ ಏಜೆನ್ಸಿಯೊಂದು ಎಲ್ಲಾ ಜಾತಿಯ ಕೀಟಗಳಿಗೂ ಮೂರೆಳೆ ಹಾಕಿ ಅಧಿಕೃತವಾಗಿಯೇ ಜೇಡದೀಕ್ಷೆ ನೀಡತೊಡಗಿತು. ಆದರೂ ಇಂತಹ ಪರಿವರ್ತಿತ ಜೇಡಗಳು ಎಷ್ಟೇ ಸಮರ್ಥವಾಗಿ ಜಾಲರಚನೆಯ ಕೌಶಲಗಳನ್ನು ರೂಢಿಸಿಕೊಂಡರೂ, ಯಥೋರ್ಣನಾಭಿಃ ಸೃಜತೇ ಗೃಹ್ಣತೇ ಚ ಎಂಬ ಆರ್ಷವಾಕ್ಯದ ಗ್ರಹಣ ಕೌಶಲವನ್ನು ಕಲಿಯಲಾರದೇ ಹೋದವು. ಅದರ ನಿಜವಾದ ಕಾರಣವೆಂದರೆ, ಕಾಲಮಹಿಮೆಯಿಂದ ನೈಜ ಜೇಡಗಳು ಕೂಡ ಈ ಗ್ರಹಣ ಕೌಶಲವನ್ನು ಮರೆತುಬಿಟ್ಟದ್ದೇ ಆಗಿತ್ತು !


ಏನೇ ಆದರೂ, ಎಲ್ಲರೂ ಜಾಲ ಬೀಸುವವರೇ ಆಗಿ ಬಿಟ್ಟರೆ, ಬಲೆಗೆ ಬೀಳಲು ಮಿಗುವ ಮಿಕಗಳಾದರೂ ಯಾರು ? ಹೀಗಾಗಿ ಕೊನೆಗೆ, ಜೀವನ ಜಾಲ ಕೌಶಲ ಅರಿಯಲು ಅಸಮರ್ಥವಾದ ಜೇಡಗಳೇ ನೈಜ ಜೇಡಗಳ ಹಾಗೂ ಪರಿವರ್ತಿತ ಜೇಡಗಳ ಬಲೆಗೆ ಬೀಳತೊಡಗಿದವು. ಅಲ್ಲಿಗೆ, ಡಾರ್ವಿನ್ನನ ವಾದಕ್ಕೆ ಮತ್ತೊಂದು ಸಮರ್ಥ ಪುರಾವೆ ಲಭ್ಯವಾಯಿತು!


ಕೀಟಪ್ರಪಂಚದ ಈ ಬದಲಾವಣೆಗಳನ್ನು ಕುತೂಹಲದಿಂದ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳ ತಂಡವೊಂದು ತಮ್ಮ ಥೀಸಿಸಿನ ಕೊನೆಗೆ ಬರೆದ ಭರತವಾಕ್ಯವೊಂದು ಹೀಗಿತ್ತು...


ಈ ಬದಲಾದ ಜೇಡಗಳ ಜೀವಿತ ಕ್ರಮವು, ಭೂಸುರರು ತಾವು ತೋಡಿದ ಮೌಢ್ಯ ಹಾಗೂ ಕಂದಾಚಾರಗಳ ಕಂದಕದಲ್ಲಿ ತಾವೇ ಬೀಳುವ ಚೋದ್ಯದಂತಿದೆ !


*****


೦೧-೦೫-೨೦೧೨ - ಎಸ್ ಎನ್ ಸಿಂಹ, ಮೇಲುಕೋಟೆ.









Thursday, February 2, 2012

Haaruva Navilugalu


ಹಾರುವ ನವಿಲುಗಳು
ನೃತ್ಯದಲ್ಲಿ ನವಿಲುಗಳು ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದವು. ಆ ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳೆಂದರೆ ನವಿಲುಗಳು ಮಾತ್ರವೇ ಎಂಬಂತಾಗಿಹೋಗಿತ್ತು. ಈ ದಬ್ಬಾಳಿಕೆಯನ್ನು ಸಹಿಸಲಾರದೆ ಕೆಂಬೂತಗಳು ದಂಗೆಯೆದ್ದವು. ತಮ್ಮನ್ನು ಹೀಗೆಯೇ ಕಡೆಗಣಿಸಿದರೆ, ತಾವೆಲ್ಲ ಎದ್ಧೋದನ ಧರ್ಮಕ್ಕೆ ಸಾಮೂಹಿಕವಾಗಿ ಗುಳೆ ಹೋಗುವುದಾಗಿ ಬೆದರಿಸಿದವು.


(ಕಪಿಲವಸ್ತುವಿನ ದೊರೆ ಶುದ್ಧೋದನ ಅವನ ಮಗ ರಾತ್ರೋರಾತ್ರಿ ಎದ್ಹೋದನ 
ಎಂಬ ಪದ್ಯಕ್ಕೂ ಈ ಕಥೆಗೂ ಯಾವುದೇ ಸಂಬಂಧವಿಲ್ಲ. - ಲೇ)


ಮೃಗೀಯ ಸರ್ಕಾರ ಈ ಬೆದರಿಕೆಗೆ ನಡುಗಿ ಹೋಯಿತು. ಒಡನೆಯೇ ಫರ್ಮಾನು ಹೊರಡಿಸಿ ಕೆಂಬೂತಗಳಿಗೆ ಮೀಸಲು ನಿಗದಿ ಪಡಿಸಿತು. ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ನವಿಲುಗಳಿಗೆ ಆದ್ಯತೆ ನೀಡತಕ್ಕದ್ದಲ್ಲವೆಂದೂ, ಕೆಂಬೂತಗಳ ಕುಣಿತವನ್ನು ಕಡ್ಡಾಯವಾಗಿ ಏರ್ಪಡಿಸಬೇಕೆಂದೂ ಅಧಿಕೃತವಾಗಿಯೇ ಘೋಷಿಸಲಾಯಿತು. ಮತ್ತು ಕೆಂಬೂತಗಳಿಗೆ ಉಚಿತವಾಗಿ ಯಥೇಷ್ಟ ಕಾಳು ಕಡಿ ನೀಡುವ ಯೋಜನೆಯೂ ಜಾರಿಯಾಯಿತು. 


ಹಸಿದ ನವಿಲುಗಳು ದಾರಿ ಕಾಣದೆ ಖಾಸಗಿ ಕಾರ್ಯಕ್ರಮಗಳ ಮೊರೆಹೋದವು. ಸರ್ಕಾರೀ ಸವಲತ್ತುಗಳಷ್ಟು ಪುಷ್ಕಳವಾಗಿ ಲಭ್ಯವಾಗದಿದ್ದರೂ ನವಿಲುಗಳ ಜೀವನೋಪಾಯಕ್ಕೇನೂ ತೊಂದರೆಯಾಗಲಿಲ್ಲ. ಹಾಳು ನವಿಲುಗಳು ಹೀಗೂ ಬದುಕುವುದನ್ನು ಸೈರಿಸಲಾಗದ  ಕೆಂಬೂತಗಳು ತಮ್ಮದೇ ಬಾಸೆಯ ಕೆಂಬೂತ ಸಾಯಿತಿಯೊಂದನ್ನು ಮುಂದಿಟ್ಟುಕೊಂಡು, ಖಾಸಗೀ ರಂಗದಲ್ಲೂ ಕೆಂಬೂತಗಳಿಗೇ ಮೀಸಲು ಬೇಕೆಂದು ಹೋರಾಡತೊಡಗಿದವು. ಈ ವರಾತ ತಾಳಲಾರದೆ ಎಷ್ಟೋ ಖಾಸಗಿ ರಂಗಗಳೇ ಮುಚ್ಚಿಹೋದವು. ಇಂಥ ಹೊತ್ತಿನಲ್ಲಿ ಪ್ರೊಫೆಸರ್ ಶಾಸ್ತ್ರಿ ಮುಂತಾದ ವಿಕಾರವಾದಿ ಸುದ್ದಿಜೀವಿ ನವಿಲುಗಳು, ಕೆಂಬೂತಗಳನ್ನು ಬೆಂಬಲಿಸುವಂತೆ ನಟಿಸಿ, ತಮ್ಮ ಜೀವನವನ್ನು ಸುಖವಾಗಿ ಸಾಗಿಸಿಕೊಂಡವು ! ಮತ್ತು ಪ್ರಶಸ್ತಿಗಳನ್ನೂ ಗಿಟ್ಟಿಸಿಕೊಂಡವು ! 


ಆದರೆ, ಎಷ್ಟೇ ಡಂಗೂರ ಹೊಡೆದರೂ, ಕೆಂಬೂತಗಳ ಕುಣಿತವನ್ನೇ  ದೇಶೀ ಪರಂಪರೆ ಎಂದು ಬಿಂಬಿಸಿದರೂ ವಿದೇಶೀಯರಿಗೆ ಹಾಗೂ ನೈಜಕಲಾರಸಿಕರಿಗೆ ಅದು ರುಚಿಸದೇ ಹೋಯಿತು. ಅವರು ನವಿಲುಗಳನ್ನೇ ಹುಡುಕಿಕೊಂಡು ಬಂದು ಅವುಗಳ ಪರಂಪರೆಯ ರಹಸ್ಯಗಳನ್ನು ಅರಿಯತೊಡಗಿದರು. ಈ ಸಂದರ್ಭವನ್ನು ಬಳಸಿಕೊಂಡು ಹಾರುವ ಶಕ್ತಿಯುಳ್ಳ ನವಿಲುಗಳು ವಿದೇಶಗಳಿಗೆ ಹಾರಿ, ಗುಡಿಕಟ್ಟಿ, ಗರಿಗೆದರಿ ಜೀವಿಸತೊಡಗಿದವು. ಆಗ, ಇಂತಹ  ಪ್ರತಿಭಾ ಪಲಾಯನವನ್ನು ನಿಷೇಧಿಸಬೇಕು ಎಂದು  ಸುದ್ದಿಜೀವಿಗಳು ಬೊಬ್ಬಿಡತೊಡಗಿದರು.


ಇತ್ತ, ಹಾರುವ ಶಕ್ತಿಯಿಲ್ಲದೆ ಇಲ್ಲೇ ಉಳಿದ, ಖಾಸಗಿರಂಗದಲ್ಲೂ ಅವಕಾಶ ಸಿಗದ ನವಿಲುಗಳು ತಮ್ಮ ಪಿಂಛವನ್ನೇ ಕಸಪೊರಕೆಯಂತೆ ಬಳಸಲು ಕಲಿತವು. ಹೀಗೆ ತಮ್ಮತನ ಕಳೆದುಕೊಂಡು, ರೂಪಾಂತರಗೊಂಡು ಯಾವುದೇ ಕೆಲಸಕ್ಕೂ ಸೈ ಎಂದು ಜೀವಿಸಲು ಕಲಿತ ನವಿಲುಗಳು, ತಮ್ಮನ್ನೂ ಕೆಂಬೂತಗಳ ಪ್ರವರ್ಗಕ್ಕೇ ಸೇರಿಸಬೇಕೆಂದು ಮೃಗೀಯ ಸರ್ಕಾರವನ್ನು ಗೋಗರೆಯತೊಡಗಿದವು. ಇದನ್ನು ಕಂಡು ಇನ್ನಿತರ ಹಲವಾರು ಪ್ರಾಣಿ-ಪಕ್ಷಿಗಳೂ ತಂತಮ್ಮದೇ ಮಠಗಳನ್ನು ಕಟ್ಟಿಕೊಂಡು, ತಮ್ಮನ್ನೂ ಕೆಂಬೂತ ಪ್ರವರ್ಗಗಳಿಗೆ ಸೇರಿಸಬೇಕೆಂದು ಮೃಗೀಯ ಸರ್ಕಾರವನ್ನು ಒತ್ತಾಯಪಡಿಸತೊಡಗಿದವು.


ಕೊನೆಗೊಂದು ಪಸಂದಾದ ದಿನ, ಒನ್ ಫೈನ್ ಡೇ, ಆ ದೇಶದ ಸಮಸ್ತ ಪ್ರಾಣಿ-ಪಕ್ಷಿಗಳೂ ತಂತಮ್ಮ ವೈಶಿಷ್ಟ್ಯಗಳನ್ನು ಕಳೆದುಕೊಂಡು ಕೆಂಬೂತಗಳಾಗಿಹೋದವು !


ಆಗ, ಅಲ್ಲೆಲ್ಲೋ ಕುಂಭೀಪಾಕದಲ್ಲಿ ಶಾಶ್ವತವಾಗಿ ಠಿಕಾಣಿ ಹೂಡಿದ್ದ ಸಂವಿಧಾನ ಶಿಲ್ಪಿ ಕೆಂಬೂತವೊಂದು, ತಾನು ಸ್ವರ್ಗದಲ್ಲಿರುವಂತೆ ಸಂಭ್ರಮಿಸಿತು !


ನೀತಿ : ಹಾರುವ, ಶಕ್ತಿಯನ್ನು ಬೆಳೆಸಿಕೊಳ್ಳದಿದ್ದರೆ ಯಾರಿಗೂ ಉಳಿಗಾಲವಿಲ್ಲ.


*****
೨೪-೦೧-೨೦೧೨ - ಎಸ್ ಎನ್ ಸಿಂಹ, ಮೇಲುಕೋಟೆ.