ಅಯೋಮಯ
ಅದೆಷ್ಟೋ ವರ್ಷಗಳ ತಪನೆಯ ನಂತರ ಅವನಿಗೆ ಮದುವೆಯಾಯಿತು.
ಅದೆಷ್ಟೆಷ್ಟೋ ಹರಕೆಗಳನ್ನು ಹೊತ್ತಮೇಲೆ ಒಂದು ಮಗುವಾಯಿತು.
ತನ್ನ ವಂಶವೃಕ್ಷವನ್ನು ಮುಂದುವರೆಸುವ ಗಂಡಾಗಲಿಲ್ಲವೆಂಬುದು ಒಂದು ಕ್ಷಣಿಕ ಕೊರಗು ಅಷ್ಟೇ !
ತನ್ನೆಲ್ಲ ಪ್ರೀತಿಯನ್ನೂ ಧಾರೆಯೆರೆದು ಆ ಮಗುವನ್ನು ಬೆಳೆಸಿದ.
ಅವಳ ಆರೋಗ್ಯ ಕೆಟ್ಟಾಗ ಅಮ್ಮನಿಗಿಂತ ಹೆಚ್ಚಾಗಿ ಆರೈಕೆ ಮಾಡಿದ.
ಕಕ್ಕುಲತೆಯಿಂದ ಕಾಳಜಿ ಮಾಡಿದ.
ಅವಳ ಯಾವ ಬೇಡಿಕೆಗೂ ಇಲ್ಲವೆನ್ನದೆ ಎಲ್ಲ ಅಗತ್ಯಗಳನ್ನೂ ಪೂರೈಸಿದ.
ಪ್ರೀತಿ ಹರಿಸುವುದರಲ್ಲಿ ದಂಪತಿಗಳಲ್ಲೇ ಪೈಪೋಟಿ !
ಅಂಥ ಪ್ರೀತಿಯ ಮಹಾಪೂರದಲ್ಲಿ ಯಾವುದಕ್ಕೂ ಕೊರತೆಯಿಲ್ಲದೆ ಬೆಳೆದ ಅವಳೀಗ 9 ನೇ ಕ್ಲಾಸು.
ಒಂದು ದಿನ ಅವನಿಗೆ ತುರ್ತಾಗಿ ರಬ್ಬರು ಬೇಕಾಯಿತು.
ಮಗಳು ಆಡಲು ಹೊರ ಹೋಗಿದ್ದಾಳೆ.
ಅವಳ ಸ್ಕೂಲು ಬ್ಯಾಗಿಗೆ ಕೈ ಹಾಕಿ ಜ್ಯಾಮಿತಿ ಬಾಕ್ಸ್ ತೆಗೆದುಕೊಂಡ.
ಘಮ್ಮಗೆ ಸ್ಟ್ರಾಬೆರಿ ಹಣ್ಣಿನ ವಾಸನೆ ಬರುತ್ತಿದೆ !
ಗುಡ್ ! ಒಳ್ಳೆಯ ಫ್ಲೇವರಿನ ರಬ್ಬರ್ ತಗೊಂಡಿದಾಳೆ ತನ್ನ ಮಗಳು ಎಂದು ಮನಸ್ಸಿನಲ್ಲೇ ಬೀಗುತ್ತಾ
ಬಾಕ್ಸ್ ಓಪನ್ ಮಾಡಿದವನೇ..,
ದಿಗ್ಭ್ರಾಂತನಂತೆ ನಿಂತುಬಿಟ್ಟ !
ಅಲ್ಲಿದ್ದುದು ಮೂರ್ನಾಲ್ಕು ಕಾಂಡೋಂ ಪ್ಯಾಕೆಟ್ಗಳು !
9 ನೇ ಕ್ಲಾಸಿನ ಹುಡುಗಿಯ ಬ್ಯಾಗಿನಲ್ಲಿ !
ಮಗಳ ಹತ್ತಿರ ಅವು ಸಿಕ್ಕಿದ್ದಕ್ಕಾಗಿ ದುಃಖ ಪಡಬೇಕೋ ! ಅಥವಾ
ಈ ವಯಸ್ಸಿಗೇ ಅದನ್ನು ಬಳಸುವ ತಿಳುವಳಿಕೆ ಬಂದುದಕ್ಕೆ ಸಂತೋಷ ಪಡಬೇಕೋ !
ಅವನಿಗೆ ತಿಳಿಯಲಿಲ್ಲ..,
ಅಯೋಮಯನಾಗಿ ನಿಂತುಬಿಟ್ಟ !
*****
02-07-2012 - ಎಸ್ ಎನ್ ಸಿಂಹ, ಮೇಲುಕೋಟೆ.
No comments:
Post a Comment