ದೇವರು ಹೆದರುತ್ತಾನೆ....
ಯೋಗನಿದ್ರೆಯಲ್ಲಿದ್ದ ಭಗವಂತನಿಗೆ ಏನೋ ಅರಕೆಯಾಯಿತು. ಕಣ್ಣು ಬಿಟ್ಟ. ಮಹಾಲಕ್ಷ್ಮಿಯು ಕಾಲು ಒತ್ತುವುದನ್ನು ನಿಲ್ಲಿಸಿ ಕೆಳಗೆ ಪ್ರಯೋಗಶಾಲೆಯತ್ತ ನೋಡುತ್ತಿದ್ದಾಳೆ. ಯಾವ ಲ್ಯಾಬ್ ಅದು ಎಂದು ಗೂಗಲ್ ಕಾಸ್ಮೋದಲ್ಲೇ ವೀಕ್ಷಿಸಿದ. ‘ಭೂಮಿ’ ಎಂಬ ಬೋರ್ಡು ಗೋಚರಿಸಿತು. ಕಿರುನಗುತ್ತಾ ಮೃದುವಾಗಿ ದೇವಿ! ಎಂದು ಕರೆದ. ಆ ಕರೆಯಿಂದ ತನ್ನ ಕರ್ತವ್ಯಪರಾಙ್ಮುಖತೆ ನೆನಪಾಗಿ ಒಂದು ಕ್ಷಣ ಸಂಕೋಚದಿಂದ ಕಂಪಿಸಿದರೂ, ಅತ್ತಲೇ ನೋಡುತ್ತಿದ್ದಾಳೆ ಲಕ್ಷ್ಮಿ. ಏನು ದೇವಿ? ಎಂದ ಪರಮಾತ್ಮ.
ಅಲ್ಲಿ ನೋಡಿ, ಭೂಲೋಕದಲ್ಲಿ ತುಂಬ ವೇಗವಾಗಿ ಬದಲಾವಣೆಗಳು ನಡೆಯುತ್ತಿವೆ ಅಂದಳು. ಅವಳ ಧ್ವನಿಯ ಆಳದಲ್ಲಿ ಏನೋ ಒಂದು ವಿಧದ ಅದಮ್ಯ ಸಂತಸದ ಛಾಯೆ ಇಣುಕುತ್ತಿದೆ.
ಗೂಗಲ್ ಅರ್ಥ್ ಅನ್ನು ಎನ್‍ಲಾರ್ಜ್ ಮಾಡಿಕೊಂಡು ಆ ಭೂಭಾಗವನ್ನು ಗಮನಿಸಿದ ಭಗವಂತ. ಪ್ರಪಂಚದ ಒಟ್ಟು ಭೂಭಾಗದ ಕೇವಲ ಶೇಕಡಾ 2.4ರಷ್ಟಿರುವ ಆ ಪ್ರದೇಶದಲ್ಲಿ ವಾಸವಿರುವ ಜನರ ಸಂಖ್ಯೆ ಮಾತ್ರ ಶೇಕಡಾ 19.3ರಷ್ಟು! ಅಂದರೆ ಜನ ಬದುಕಲು ಹಾತೊರೆಯುವ ಸಮೃದ್ಧ ಸುಖೀ ಪ್ರದೇಶ ಅದು ಅಂದಹಾಗಾಯಿತು! ಈಗ ಅಲ್ಲೇನಾಗುತ್ತಿದೆ? ಅಲ್ಲಿನ ಕಾಲಮಾನದ ಪ್ರಕಾರ, ಸಾವಿರಾರು ವರ್ಷಗಳಿಂದ ಶೋಷಿತರಾಗಿದ್ದೇವೆ ಎಂದುಕೊಂಡಿರುವ ಸ್ತ್ರೀ ಸಮೂಹ ಪುರುಷರ ಮೇಲೆ ಪ್ರತೀಕಾರ ಸಾಧಿಸಲು ಹವಣಿಸುತ್ತಿದೆ!
ಹ್ಯಾಗೆ ಗೋಳುಹುಯ್ದುಕೊಳ್ಳುತ್ತಿದ್ದಾರೆ ನೋಡಿ ಗಂಡಸರನ್ನು. ಇನ್ನು ಕೆಲವೇ ದಿನಗಳಲ್ಲಿ ಗಂಡಸರನ್ನು ಪೂರ್ತಿ ನಿರ್ವೀರ್ಯರನ್ನಾಗಿ ಮಾಡಿ ಗುಲಾಮರಾಗಿಸಿಕೊಂಡುಬಿಡುತ್ತಾರೆ. ಮತ್ತೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ನೆಲೆಗೊಳ್ಳುತ್ತದೆ ಎಂದಳು ಲಕ್ಷ್ಮಿ.
ಮಂದಹಾಸ ಬೀರುತ್ತಾ ಗೋಲವನ್ನು ಗಿರ್ರನೆ ತಿರುಗಿಸಿದ ಭಗವಂತ. ನಿಡಿದಾದ ಉಸಿರು ಬಿಡುತ್ತಾ, ನನಗೆ ನಿನ್ನ ಬಗ್ಗೆಯೇ ಚಿಂತೆಯಾಗುತ್ತಿದೆ ದೇವಿ! ಎಂದ. ನನ್ನ ಬಗ್ಗೆಯೇ? ಅಚ್ಚರಿಯಿಂದ ಪ್ರಶ್ನಿಸಿದಳು ಲಕ್ಷ್ಮಿ.
ನೋಡು ಭೂಮಿಯಲ್ಲಿರುವ 193 ದೇಶಗಳಲ್ಲಿ 49 ದೇಶಗಳು ಸೈತಾನ(ಸ)ನ ಅನುಯಾಯಿಗಳವು. ಅಲ್ಪಸಂಖ್ಯಾತರೆಂಬುವವರು ಆಕ್ರಮಿಸಿರುವ ಆ 49 ಮ್ಲೇಂಛ ದೇಶಗಳಲ್ಲಿ ಹೆಣ್ಣು ದೇವತೆ ಎಂಬ ಕಲ್ಪನೆಯನ್ನೇ ನಾಶಮಾಡಿಬಿಟ್ಟಿದ್ದಾನೆ ಆ ಸೈತಾನ(ಸ). ಇನ್ನುಳಿದ 143 ದೇಶಗಳಲ್ಲಿ ಕನ್ಯಾಮಾತೆಯ ಸ್ವರೂಪವನ್ನು ಗೌರವಿಸುತ್ತಾರೆಯೇ ವಿನಾ, ಸ್ವತಂತ್ರ ಸ್ತ್ರೀ ಶಕ್ತಿಯ ಅಥವಾ ಮಾತೃಸ್ವರೂಪದ ಆರಾಧನೆಯಿಲ್ಲ.
ಈಗ ನೀನು ನೋಡುತ್ತಿರುವ ಈ ಒಂದು ದೇಶದಲ್ಲಿ ಮಾತ್ರವೇ ಹೆಂಗಸರಿಗೆ ಅತ್ಯುನ್ನತ ಸ್ಥಾನಗೌರವವನ್ನೂ, ಹೆಚ್ಚೇ ಎನ್ನಬಹುದಾದ ಸ್ವಾತಂತ್ರ್ಯವನ್ನೂ ನೀಡಲಾಗಿತ್ತು. ಅಲ್ಲಿ ಮಾತ್ರವೇ ಅಲ್ಲವೇ ಮನೆ ಮನೆಗಳಲ್ಲೂ ನಿನ್ನನ್ನು ಪೂಜಿಸುತ್ತಿದ್ದುದು? ಅದರಲ್ಲೂ ನಿನ್ನನ್ನು ಪಾರತಂತ್ರ್ಯದಿಂದ ವಿಮುಕ್ತಿಗೊಳಿಸಿ, ವಿಶಿಷ್ಟಾದ್ವೈತಿಗಳ ಮೂಲಕ ಸ್ವತಂತ್ರಳೆಂದು ಪ್ರಚುರಪಡಿಸಿದ ಮೇಲೆ ಅಲ್ಲಿ ನಿನ್ನ ಆರಾಧನೆ ಇನ್ನೂ ಹೆಚ್ಚಿತು. ಈಗ ಅಲ್ಲಿನ ಹೆಂಗಸರು ತಮಗೆ ದೊರೆತ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡರೆ ಏನಾಗಬಹುದು ಯೋಚಿಸು....
ಇನ್ನೇನಾಗುತ್ತದೆ! ಉಳಿದ ದೇಶಗಳ ಹೆಂಗಸರೂ ಅವರಿಂದ ಪ್ರಚೋದಿತರಾಗುತ್ತಾರೆ. ಇಡೀ ಭೂಮಿಯಲ್ಲಿ ಗಂಡಸರ ಪಾಶವೀ ದಬ್ಬಾಳಿಕೆ ಕೊನೆಯಾಗುತ್ತದೆ ಎಂದಳು ಲಕ್ಷ್ಮಿ. ಅವಳಿಗೇ ಗೊತ್ತಿಲ್ಲದೆ ಅವಳ ದನಿ ಅಗತ್ಯಕ್ಕಿಂತ ಹೆಚ್ಚು ಬಿರುಸಾಗಿತ್ತು!
ಭಗವಂತನ ಮುಖದಲ್ಲಿ ಮಂದಹಾಸ ಎಂದಿಗೂ ಮಾಸುವುದೇ ಇಲ್ಲವೇನೋ! ಕಿರುನಗು ಸೂಸುತ್ತಾ, ದೇವಿ! ಆ ಪುಣ್ಯಭೂಮಿಯತ್ತ ಸ್ವಲ್ಪ ಸೂಕ್ಷ್ಮವಾಗಿ ನಿರುಕಿಸು. ಇಷ್ಟುಕಾಲ ನಿನ್ನ ಆರಾಧನೆಯ ತಾಣವಾಗಿದ್ದ ಆ ದೇಶದಲ್ಲಿ ಅಲ್ಪಸಂಖ್ಯಾತರು ನಾಯಿಕೊಡೆಗಳಂತೆ ಹೆಚ್ಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗಂಡನ ಅಗತ್ಯವೇ ತಮಗಿಲ್ಲ, ಯಾವ ಗಂಡಸಾದರೂ ಸರಿ ಅಥವಾ ಸುಖ ನೀಡುವ ಯಂತ್ರವೊಂದಿದ್ದರೂ ಸಾಕು ಎಂಬಂತಹ ಸ್ತ್ರೀಯರ ಉಪೇಕ್ಷೆ ಅಸಹಕಾರಗಳು ಹೀಗೇ ಹೆಚ್ಚಾದರೆ, ಆ ದೇಶದ ಉದಾರ ಸ್ವಭಾವದ ಗಂಡಸರು ಕೂಡ ಒಂದಲ್ಲ ಎರಡಲ್ಲ, ನಾಲ್ಕು ನಾಲ್ಕು ಗುಲಾಮಳನ್ನು ಹೊಂದಬಹುದು ಎಂಬ ಆಶೆಯಿಂದ, ಸ್ವಯಂ ಪ್ರೇರಣೆಯಿಂದಲೇ ಆ ಸೈತಾನ(ಸ)ನ ಮತವನ್ನು ಸೇರಲೆಳಸುವುದಿಲ್ಲವೇ? ಆ ಮತದಲ್ಲಿ ಹೆಂಗಸರನ್ನು ಹೇಗೆ ತುಳಿದಿಡಲಾಗಿದೆ ಎಂದು ನಿನಗೇ ಗೊತ್ತಲ್ಲ! ನಿನ್ನ ಪೂಜಾಸ್ಥಾನವಾಗಿದ್ದ ಆ ಪುಣ್ಯಭೂಮಿ, ಸೈತಾನ(ಸ)ನ ಹಿಡಿತದ 50ನೆಯ ಮ್ಲೇಂಛದೇಶವಾಗಿ ಮಾರ್ಪಡುತ್ತದೆ. ನನ್ನ, ನಿನ್ನ ಮಾತ್ರವಲ್ಲ ಇತರ ಮುಕ್ಕೋಟಿ ದೇವಾನುದೇವತೆಗಳ ಆಲಯಗಳೂ ಧ್ವಂಸಗೊಳ್ಳುತ್ತವೆ. ಅಲ್ಲವೇ? ಎಂದ.
ಲಕ್ಷ್ಮಿಯ ಹಣೆಯ ಮೇಲೆ ಸ್ವೇದ ಬಿಂದುಗಳು ಮೂಡಿದವು. ಅಥವಾ ಅವು ಕ್ಷೀರಸಾಗರ-ತರಂಗ-ಶೀಕರಗಳೋ! ಅಧರಗಳು ಕಂಪಿಸುತ್ತಿದ್ದರೂ ದೃಢವಾದ ಧ್ವನಿಯಲ್ಲಿ ನುಡಿದಳು ಮಹಾಲಕ್ಷ್ಮಿ. ಇಲ್ಲ. ಹಾಗಾಗಲು ನಾನು ಬಿಡುವುದಿಲ್ಲ. ಧರ್ಮದ ಶ್ರದ್ಧೆಯ ಕೇಂದ್ರ ಹೆಣ್ಣು. ಆ ಕೇಂದ್ರ ಶಿಥಿಲವಾಗಲು ನಾನು ಬಿಡುವುದಿಲ್ಲ. ಭಾರತವರ್ಷವು ಮ್ಲೇಂಛವರ್ಷವಾಗಲು ನಾನು ಆಸ್ಪದ ಕೊಡಲಾರೆ ಎನ್ನುತ್ತಾ ಭೂಲೋಕಕ್ಕೆ ಹೊರಟುಬಿಟ್ಟಳು.
ಭಗವತಿಗೆ ಹಾಗೊಂದು ಜವಾಬ್ದಾರಿ ಹೊರಿಸಿದರೂ ಭಗವಂತನ ಆಲೋಚನೆಗಳು ನಿಲ್ಲಲಿಲ್ಲ. ಅವನಿಗೆ ಗೊತ್ತು. ಹೆಂಗಸಿನ ಬಂಡಾಯವೆನ್ನುವುದು ಅಣುವಿದಳನದ ಹಾಗೆ. ಎಲೆಕ್ಟ್ರಾನುಗಳನ್ನು ಹೀರುವ ಸೀಸದ ಕಡ್ಡಿಗಳನ್ನು ಅಲ್ಲಲ್ಲಿ ತೂರಿಸಿ ನಿಯಂತ್ರಿಸದಿದ್ದರೆ ಮಹಾಸ್ಫೋಟವಾಗುವುದು ನಿಶ್ಚಿತ. ಅದರಿಂದ ಇಡೀ ಪ್ರಯೋಗಶಾಲೆಯೇ ನಾಶವಾಗಬಹುದು! ‘ಹೆರುವ ಯಂತ್ರ’ಗಳಾಗುವುದಿಲ್ಲ ಎಂದು ಮೊಂಡು ಹೂಡುವ ಹೆಂಗಸರ ಬಂಡಾಯದಿಂದ ಸಂತತಿಯೇ ಕ್ಷೀಣಿಸಿ, ಒಂದು ಜನಾಂಗವು ಸಂಪೂರ್ಣ ನಾಶವಾಗಿಯೇ ಬಿಡುತ್ತದೋ? ಅದರಿಂದ ತನ್ನ ಅಸ್ತಿತ್ವಕ್ಕೇನಾದರೂ ಧಕ್ಕೆಯಾಗುತ್ತದೆಯೋ?
ಸ್ವಯಂ ದೇವರೇ ಆದರೂ, ಆ ಸಂದೇಹಕ್ಕೆ ಭಗವಂತನಿಗೂ ಉತ್ತರ ದಕ್ಕಲಿಲ್ಲ. ಅವನ ಹಣೆಯ ಮೇಲೂ ಕ್ಷೀರಸಾಗರ-ತರಂಗ-ಶೀಕರಗಳು ಮುತ್ತಿನ ಮಣಿಗಳಂತೆ ಘನೀಭವಿಸಿದವು.
ಹೆಂಗಸಿನ ಬಂಡಾಯಕ್ಕೆ ದೇವರೂ ಹೆದರುತ್ತಾನೋ..!
25-07-2010 - ಎಸ್ ಎನ್ ಸಿಂಹ, ಮೇಲುಕೋಟೆ
No comments:
Post a Comment