ಪುಮ್ಮೀನು
ಗಾಳ ಹಾಕಿ ಮೀನು ಹಿಡಿಯುವುದು ಅವಳ ಮೋಜಿನ ಹವ್ಯಾಸವಾಗಿತ್ತು.
ಅಂದಮಾತ್ರಕ್ಕೆ ಅವಳೇನೂ ಬೆಸ್ತರವಳಲ್ಲ.
ಮೀನು ಹಿಡಿಯುವಂತಹ ಹಿಂಸ್ರಕ ಹವ್ಯಾಸ ಇರುವುದರಿಂದ ಜೈನಳೂ ಇರಲಿಕ್ಕಿಲ್ಲ.
ತಿನ್ನುವ ಉದ್ದೇಶವೂ ಇಲ್ಲದ್ದರಿಂದ, ಕೊಂದ ಪಾಪವನ್ನು ಬೇಯಿಸಿತಿಂದು ಕಳೆದುಕೊಳ್ಳುವ ಬೌದ್ಧಳೂ ಅಲ್ಲ.
ಆಗಾಗ, "ನಾನು ಮ್ಲೇಂಛಳಾಗಿ ಮತಾಂತರಗೊಂಡುಬಿಡುತ್ತೇನೆ" ಎನ್ನುತ್ತಿರುತ್ತಾಳಾದ್ದರಿಂದ...
"ಕೊಲ್ಲುವುದೆ ಕಸುಬಾದ ಉಗ್ರ-ಪ್ರವಾದಿಗಳ" ಮತಕ್ಕೆ ಸೇರಿದವಳೂ ಅಲ್ಲ.
ಬಹುಶಃ ಕ್ರತುವಿಗಾಗಿ ಕೊಲ್ಲುವ ಜಾತಿಯವಳೋ..?
ಗೊತ್ತಿಲ್ಲ! ಮೋಜಿಗಾಗಿ ಕೊಲ್ಲುವವರದ್ದೇ ಹೊಸದೊಂದು ಜಾತಿ ಇದ್ದರೂ ಇರಬಹುದು!
ಒಟ್ಟಿನಲ್ಲಿ ಗಾಳಕ್ಕೆ ಮೀನುಗಳು ಸಿಕ್ಕಿ ಚಡಪಡಿಸುವುದನ್ನು ನೋಡಿ ಆನಂದಿಸುವುದಷ್ಟೇ ಅವಳ ಉದ್ದೇಶ.
ಏಕಕಾಲದಲ್ಲಿ ಹಲವಾರು ಗಾಳಗಳನ್ನು ಹೂಡಬಲ್ಲ ಸ್ತ್ರೀಸಹಜ ಕಲೆ ಅವಳಿಗೆ ಅನಾಯಾಸವಾಗಿ ಸಿದ್ಧಿಸಿತ್ತು.
ಬಲೆಯನ್ನೇ ಹರವಿದ್ದರೆ ಸಾವಿರಾರು ಮೀನುಗಳನ್ನು ಅವಳು ಒಟ್ಟಿಗೇ ಹಿಡಿಯಬಹುದಿತ್ತು.
ಆದರೆ ಗಾಳದ ಮಜಾ ಅದರಲ್ಲೆಲ್ಲಿ ಸಿಗುತ್ತಿತ್ತು !
ಮೀನುಗಳು ಗಾಳದ ಹುಳುವಿಗೆ ಆಕರ್ಷಿತವಾಗಿ ಬಾಯಿ ಹಾಕುವಾಗಿನ ತವಕ,
ಗಾಳ ದವಡೆಗೆ ಸಿಲುಕಿಕೊಂಡಾಗ ಅನುಭವಿಸುವ ಅನೂಹ್ಯ ಆಘಾತ,
ಗಾಳದಿಂದ ಬಿಡಿಸಿಕೊಳ್ಳಲು ನಡೆಸುವ ವಿಫಲ ಒದ್ದಾಟ,
ಸಾಧ್ಯವಾಗದಿದ್ದಾಗ ಗಾಳವನ್ನು ಕಚ್ಚಿಕೊಂಡೇ ನೀರಿನಾಳಕ್ಕೆ ನುಗ್ಗಿ ತಪ್ಪಿಸಿಕೊಳ್ಳುವ ಧಾವಂತ,
ಕೊನೆಗೊಮ್ಮೆ ನೀರಿನಿಂದ ಮೇಲೆತ್ತಿದಾಗ ಪ್ರಾಣಕ್ಕಾಗಿ ವಿಲವಿಲನೆ ಅವು ನಡೆಸುವ ಅಂತಿಮ ಹೋರಾಟ..
ಇವೆಲ್ಲ ಅವಳಿಗೆ ತುಂಬ ಮಜಾ ಕೊಡುತ್ತಿದ್ದವು.
ಹಾಗೆ ನೀರಿನಿಂದ ಮೇಲೆತ್ತಿ ಅವು ವಿಲವಿಲನೆ ಪ್ರಾಣಕ್ಕಾಗಿ ಒದ್ದಾಡುವಾಗ, ಅವಳು,
ಆ ಮೀನುಗಳಿಗೊಂದು ಹೂ ಮುತ್ತಿತ್ತು, ಮೈಯನ್ನು ನವಿರಾಗಿ ನೇವರಿಸುತ್ತಾ,
ನಿನ್ನನ್ನು ಮನೆಗೆ ತಗೊಂಡೋಗಿ ಅಕ್ವೇರಿಯಂನಲ್ಲಿಟ್ಟು ಜೋಪಾನವಾಗಿ ನೋಡ್ಕೋತೀನಿ ರಾಜಾ ! ಎಂದು ಸಂತೈಸುತ್ತಿದ್ದಳು.
ಅವಳ ಆ ಸ್ಪರ್ಷಕ್ಕೂ ಮಾತಿಗೂ ಮರುಳಾಗಿ ಮೀನುಗಳು ಅಂಥ ಪ್ರಾಣೋತ್ಕ್ರಮಣ ಸಮಯದಲ್ಲೂ ಸಂತಸಪಡುತ್ತಿದ್ದವು.
ಆದರೆ ಅವಳು, ಅವುಗಳನ್ನು ಹಾಗೆ ಸಂತೋಷದಿಂದ ಸಾಯಲೂ ಬಿಡದೆ, ಕುಟುಕು ಜೀವ ಇರುವಾಗಲೇ ಮತ್ತೆ ನೀರಿಗೆ ಎಸೆದು ಬಿಡುತ್ತಿದ್ದಳು !
ಈ ಆಟ ಹಲವಾರು ಬಾರಿ ಪುನರಾವರ್ತನೆಯಾಗುತ್ತಿತ್ತು.
ಕೆಲವೊಮ್ಮೆ ಬಲಿಷ್ಠ ಮೀನುಗಳು ಗಾಳದ ದಾರವನ್ನೇ ತುಂಡರಿಸಿ ತಪ್ಪಿಸಿಕೊಳ್ಳುತ್ತಿದ್ದವು.
ಆದರೂ ಲೋಕದಲ್ಲಿ ಪುಮ್ಮೀನುಗಳಿಗೇನೂ ಕೊರತೆಯಿಲ್ಲದ್ದರಿಂದ ಅವಳ ಮೋಜಿನಾಟ ಅವ್ಯಾಹತವಾಗಿ ಸಾಗಿತ್ತು.
ಒಮ್ಮೆ ಒಂದು ಪುಮ್ಮೀನು, ಅವಳು ಅದೆಷ್ಟನೆಯ ಬಾರಿಯೋ, ಮುತ್ತಿಟ್ಟು ಮೈದಡವಿ ಸಂತೈಸುವಾಗ, ಅದು ಹೇಗೋ ಗಾಳದಿಂದ ಬಾಯಿ ಬಿಡಿಸಿಕೊಂಡು,
"ಈ ಸಲ ನೀನು ನನ್ನನ್ನು ತೆಗೆದು ಬುಟ್ಟಿಗೆ ಹಾಕಿಕೊಳ್ಳದೇ ಹೋದರೆ, ಗಾಳದ ಸಮೇತ ನಿನ್ನನ್ನೇ ನೀರಿನೊಳಕ್ಕೆ ಎಳೆದುಕೊಂಡು ಬಿಡ್ತೀನಿ" ಎಂದು ಹೆದರಿಸಿ,
ಮತ್ತೆ ಕಚಕ್ಕನೆ ಗಾಳವನ್ನು ಕಚ್ಚಿ ಹಿಡಿಯಿತು.
ದಿಗ್ಭ್ರಾಂತಳಾಗಿಬಿಟ್ಟಳು ! ಮೀನುಗಳಿಗೆ ಕೂಡ ತನ್ನ ನೈಜರೂಪ ತಿಳಿದುಹೋಯಿತಲ್ಲಾ ! ಎಂದು ಭ್ರಮನಿರಸನಗೊಂಡಳು.
ಆ ಮೀನನ್ನು ತೀವ್ರ ತಿರಸ್ಕಾರದಿಂದ ನೀರಿಗೆಸೆದು, ಅದು ಕಚ್ಚಿಕೊಂಡಿದ್ದ ಆ ಗಾಳವನ್ನು ಬಳಸುವುದನ್ನೇ ಬಿಟ್ಟುಬಿಟ್ಟು...,
ಬೇರೆ ಗಾಳಗಳತ್ತ ಗಮನಹರಿಸಿದಳು !
ಆ ಪುಮ್ಮೀನು ಮಾತ್ರ, ಅವಳು ಮತ್ತೊಮ್ಮೆ ತನ್ನನ್ನು ಮೇಲೆಳೆದುಕೊಂಡು, ಮುತ್ತಿಟ್ಟು ಮೈದಡವಿ ಸಂತೈಸುತ್ತಾಳೆ ಎಂಬ ನಿರೀಕ್ಷೆಯಲ್ಲಿ
ಆ ಗಾಳವನ್ನು ಇನ್ನೂ ಕಚ್ಚಿ ಹಿಡಿದುಕೊಂಡೇ ಇದೆ !
ಅರ್ಪಣೆ : ಕಡಿದುಹೋದ ಸಂಬಂಧಗಳನ್ನು ನೆನೆ-ನೆನೆದು ಕೊರ-ಕೊರಗುವ ಹುಂಬರಿಗೆ.
*****
೦೭-೦೩-೨೦೧೩ -ಎಸ್ ಎನ್ ಸಿಂಹ, ಮೇಲುಕೋಟೆ.
simha sir- i dindnt got what this storey about?
ReplyDeletevenkatesha(saptagirivasi) sampada
ಸೊಗಸಾದ ಬರಹ.`ಇದು ಕಡಿದು ಹೋದ ಸಂಬಂಧಗಳನ್ನು ನೆನೆ-ನೆನೆದು ಕೊರಗುವ ಹುಂಬರಿಗೆ' ಅನ್ನುವುದಕ್ಕಿಂತ ಮುಖ್ಖ್ಯವಾಗಿ, ಮನುಷ್ಷ್ಯರ ಸಾಂಗತ್ತ್ಯದ ಶ್ರೇಷ್ಷ್ಠತೆ ಮೌಲ್ಲ್ಯ ಅರಿಯದೆ ಬೇಕೆಂದಾಗ ಆವರಿಸುವ, ಬೇಡದಿದ್ದಾಗ ನಿರಾಕರಿಸುವ ನಮ್ಮ್ಮ ಸುತ್ತ್ತಲೇ ಇರುವ 'ಅವಕಾಶವಾದಿ` ಮನಸ್ಸುಗಳ ನಿಜ ರೂಪವನ್ನ್ನು, ಸೋಗಲಾಡಿತನವನ್ನು ಬೆತ್ತ್ತಲು ಮಾಡುವಂತಿದೆ.
ReplyDeleteಅವಳ ಆ ಸ್ಪರ್ಷಕ್ಕೂ ಮಾತಿಗೂ ಮರುಳಾಗಿ ಮೀನುಗಳು ಅಂಥ ಪ್ರಾಣೋತ್ಕ್ರಮಣ ಸಮಯದಲ್ಲೂ ಸಂತಸಪಡುತ್ತಿದ್ದವು.
ಆದರೆ ಅವಳು, ಅವುಗಳನ್ನು ಹಾಗೆ ಸಂತೋಷದಿಂದ ಸಾಯಲೂ ಬಿಡದೆ, ಕುಟುಕು ಜೀವ ಇರುವಾಗಲೇ ಮತ್ತೆ ನೀರಿಗೆ ಎಸೆದು ಬಿಡುತ್ತಿದ್ದಳು...ಈ ಸಾಲುಗಳು ಇಷ್ಷ್ಟವಾಯಿತು.
-sathish babu