Saturday, November 21, 2009

900 gram tookada kallu


900 ಗ್ರಾಂ ತೂಕದ ಕಲ್ಲು..!

ಹಲವಾರು ವರ್ಷ ಕಠಿಣ ತಪಸ್ಸು ಮಾಡಿ ಅವನು ಒಂದು ವರ ಕೇಳಿದ.
‘ತನಗೆ ಎಂಥದೇ ಗಾಯವಾದರೂ ನೋವಾಗಬಾರದು’
ದೇವರು ಸುಮ್ಮನೆ ತಥಾಸ್ತು ಅನ್ನಲಿಲ್ಲ. ‘ಆಗಬಹುದು, ಆದರೆ ಅದಕ್ಕೆ ಹಲವು ನಿಬಂಧನೆಗಳಿವೆ’ ಅಂದ.
ಇವನಿಗೆ ಆತುರ. ವಿಮಾ ಕಂಪನಿಗಳ ಬಾಂಡ್‍ಗಳಂತೆ ತುಂಬಾ ಸಣ್ಣಕ್ಷರಗಳಲ್ಲಿದ್ದ ಆ ನಿಬಂಧನೆಗಳನ್ನು ಓದುವ ಗೋಜಿಗೆ ಹೋಗದೆ -ಸಾಲ ಪಡೆಯುವವನು ದರ್ದಿನಲ್ಲಿ ಖಾಲಿ ಛಾಪಾ ಕಾಗದಕ್ಕೆ ಹೆಬ್ಬೆಟ್ಟು ಒತ್ತುವ ಹಾಗೆ- ಅದಕ್ಕೆ ರುಜು ಹಾಕಿದ. ಆ ಕರಾರಿನ ಕಾಪಿಯೊಂದನ್ನು ತಾನಿಟ್ಟುಕೊಂಡು, ಒರಿಜಿನಲ್ ಅನ್ನು ಅವನಿಗೇ ಮರಳಿಸಿದ ದೇವರು ‘ತಥಾಸ್ತು’ ಎನ್ನುತ್ತಾ ಅಂತರ್ಧಾನನಾದ.
ವರವನ್ನು ಪರೀಕ್ಷಿಸುವ ಸಲುವಾಗಿ ಇವನು ಒಂದು ಬ್ಲೇಡ್‍ನಿಂದ ಮೊಣಕೈ ಗೀರಿಕೊಂಡ. ರಕ್ತ ಜಿನುಗಿತು. ಆದರೆ ನೋವಿನ ಅನುಭವವೇ ಅಗುತ್ತಿಲ್ಲ! ಹುರ್ರೇ ಎಂದು ಕಿರುಚಿಕೊಂಡ. ಜಿನುಗಿದ ರಕ್ತ ವೇಸ್ಟ್ ಆಗಬಾರದೆಂದು ಆ ರಕ್ತದಿಂದ ಒಂದು ಪತ್ರ ಬರೆದು ಪೋಸ್ಟ್ ಮಾಡಿದ. ಕೆಲವು ಕ್ಷಣಗಳ ನಂತರ ಗಾಯ ಕೂಡ ಮಾಯವಾಯಿತು. ಇನ್ನೂ ಪರೀಕ್ಷಿಸಬೇಕೆನಿಸಿತು. ಪಿಸ್ತೂಲಿನಿಂದ ಕಣತಲೆಗೆ ಗುರಿಯಿಟ್ಟು ಗುಂಡು ಹಾರಿಸಿಕೊಂಡ. ಮಿದುಳನ್ನು ಛೇದಿಸಿಕೊಂಡು ಹೋಯಿತು ಆ ಬುಲ್ಲೆಟ್. ಆದರೂ ನೋವಾಗಲಿಲ್ಲ. ಅಷ್ಟೇ ಅಲ್ಲ ಕೆಲವು ಕ್ಷಣಗಳಲ್ಲೇ ಒಂದು ಚೂರು ಕಲೆ ಸಹ ಉಳಿಯದಂತೆ ಆ ಗಾಯವೂ ಮಾಯ್ದು ಹೋಯಿತು.
ಇಷ್ಟೆಲ್ಲ ಪೂರ್ವಸಿದ್ಧತೆ ಮಾಡಿಕೊಂಡು ನೇರವಾಗಿ ಅವಳ ಬಳಿಗೆ ಬಂದ. ರಕ್ತದಲ್ಲಿ ಬರೆದ ಪತ್ರ ಅವಳಿಗೆ ತಲಪಿತ್ತೋ ಇಲ್ಲವೋ ಗೊತ್ತಿಲ್ಲ! ಅವಳ ಎದುರು ನಿಂತವನೇ ತನ್ನೆದೆಗೆ ಕೈ ಹಾಕಿ ಬಗೆದು, ರಕ್ತ ಪಂಪಿಸುತ್ತಿದ್ದ ಹೃದಯವನ್ನು ಕಿತ್ತು ಅವಳ ಕಾಲ ಬುಡದಲ್ಲಿಟ್ಟು ‘ಐ ಲವ್ ಯೂ’ ಅಂದ.
ದನದ ಮಾಂಸ ತಿನ್ನುವ ಜಾತಿಯವಳೇ ಆದರೂ, ಅವಳು ಅವನ ಈ ಚರ್ಯೆಯಿಂದ ಗಾಬರಿಗೊಂಡಳು. ಅವನ ಇಂಥ ನಾಟಕೀಯತೆ ಅವಳಿಗೆ ತುಂಬ ಕೃತಕ ಹಾಗೂ ಬೀಭತ್ಸ ಅನ್ನಿಸಿತು. ಇವನು ತನಗೇನೋ ಮೋಸ ಮಾಡುವ ಸಲುವಾಗಿಯೇ ಬಂದಿದ್ದಾನೆ ಎಂದುಕೊಂಡ ಅವಳು, ಇನ್ನೂ ರಕ್ತ ಚಿಮ್ಮುತ್ತಾ ಲವ್-ಡವ್‍ನೆ ಬಡಿದುಕೊಳ್ಳುತ್ತಿದ್ದ ಆ ಹೃದಯವನ್ನು ಕಾಲಿನಿಂದ ಒದ್ದು ಹೊರಟುಹೋದಳು.
ವಿಷಾದದ ನಗು ಹೊಮ್ಮಿಸುತ್ತಾ ಆ ಹೃದಯವನ್ನು ಮತ್ತೆ ಅದರ ಜಾಗದಲ್ಲೇ ಇರಿಸಿಕೊಂಡು ‘ಹೋದರೆ ಹೋಗ್ತಾಳೆ, ದೇಶದಲ್ಲಿ ಹುಡುಗಿಯರಿಗೇನು ದರಿದ್ರವೇ’ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡ. ಅವನು ಸ್ತ್ರೀ-ಪುರುಷ ಅನುಪಾತಕ್ಕೆ ಸಂಬಂಧಿಸಿದ ಜನಗಣತಿಯ ವರದಿಗಳನ್ನು ನಂಬುವುದಿಲ್ಲ. ‘ಅಂಕಿ ಅಂಶಗಳೆಲ್ಲಾ ಬರಿ ಸುಳ್ಳಿನ ಕಂತೆ’ ಎಂಬ ಯಾವನೋ ಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಲ್ಲಿ ಅವನಿಗೆ ಅಪಾರ ನಂಬಿಕೆ.
ರಾತ್ರಿ ಮಲಗುವಾಗ ಎದೆಯೊಳಗೆ ಎಲ್ಲೋ ಛುಳುಕ್ಕೆಂದಂತಾಯಿತು. ಆಶ್ಚರ್ಯದಿಂದ ನೋಡಿಕೊಂಡರೆ, ಗಾಯ ಮಾಯ್ದಿದೆಯಾದರೂ ಒಂದು ಚೂರು ಕಲೆ ಉಳಿದಿದೆ. ಮೊದಲ ಬಾರಿಗೆ ಅವನು ದೇವರ ಬಗ್ಗೆ ಅಸಮಾಧಾನಗೊಂಡ.
ಬೆಳಗ್ಗೆ ಎದ್ದ ಒಡನೆ ಕರಾರಿನ ಪ್ರತಿ ಹಿಡಿದುಕೊಂಡು ಲಾಯರ್ ಅಳಗಿರಿಯ ಬಳಿ ಹೋಗಿ, ‘ದೇವರ ಮೇಲೆ ಕೇಸು ಹಾಕಬೇಕು’ ಎಂದ. ಕೊರಳಲ್ಲಿ ನೇತಾಡುತ್ತಿದ್ದ ಭೂತಗನ್ನಡಿ ಹಿಡಿದು ಕೂಲಂಕಷವಾಗಿ ಕರಾರು ಪತ್ರ ಓದಿದ ಲಾಯರು 6ನೇ ನಿಬಂಧನೆಯ ಮೇಲೆ ಬೊಟ್ಟು ಮಾಡಿದ. ಅಲ್ಲಿ ಹೀಗಿತ್ತು...
6) ಮನಸ್ಸಿಗೆ ಆದ ಗಾಯಕ್ಕೆ ಈ ವರ ಅನ್ವಯಿಸುವುದಿಲ್ಲ.
ಓದಿಕೊಂಡ ಇವನ ಮುಖ ಮ್ಲಾನವಾಯಿತು. ದೇವರು ಕೂಡ ಹೀಗೆ ನಯವಂಚನೆ ಮಾಡಿದನಲ್ಲ ಎನಿಸಿ ದುಃಖ ಉಮ್ಮಳಿಸಿ ಬಂತು. ಕರಾರನ್ನು ಹರಿದು ಹಾಕಿ, ಲಾಯರಿಗೆ ಫೀಸು ಕೂಡ ಕೊಡದೆ ಎದ್ದು ಬಂದ.
ಗಾಯಗಳನ್ನು ವಾಸಿ ಮಾಡುವುದಕ್ಕೆ ದೇವರಿಗೆ ಸಾಧ್ಯವಿಲ್ಲದೇ ಇರಬಹುದು. ಆದರೆ ‘ಕಾಲ’ಕ್ಕೆ ಆ ಶಕ್ತಿ ಇದೆ.
ಅನತಿ ಕಾಲದಲ್ಲಿಯೇ ಅವನಿಗೆ ಮತ್ತೊಬ್ಬಳ ಪರಿಚಯವಾಯಿತು. ಅದೊಂದು ದಿನ ಅವಳು ಆಪ್ಯಾಯತೆಯಿಂದ ಅವನ ತಲೆಗೂದಲಲ್ಲಿ ಕೈಯಾಡಿಸಿ, ಹೌದೋ ಅಲ್ಲವೋ ಎಂಬಂತೆ ಕೆನ್ನೆಗೆ ತುಟಿ ಸೋಕಿಸಿದಾಗ ಅವನಿಗೆ ರೋಮಾಂಚನವಾಯಿತು. ಮರುಕ್ಷಣವೇ ತನ್ನ ಎದೆ ಬಗೆದು, ಹೃದಯ ಕಿತ್ತು ಅವಳ ಮುಂದಿರಿಸಿದ.
ನಕ್ಕಳು. ‘ಏನೋ ಇದು! ಕಲ್ಲು ಕೊಡ್ತಾ ಇದೀಯಲ್ಲೋ!’ ಎಂದು ಛೇಡಿಸಿದಳು.
ನೋಡುತ್ತಾನೆ! 900 ಗ್ರಾಂ ತೂಕದ ಕಲ್ಲು!
ಅದು ಕಲ್ಲಿನಂತೆ ಕಾಣುತ್ತಾ ಇದೆಯೋ? ಅಥವಾ ಕಲ್ಲೇಯೋ?
ಅವನಿಗೆ ತತ್ಕ್ಷಣಕ್ಕೆ ನಿರ್ಧರಿಸಲಾಗಲಿಲ್ಲ. ಪರೀಕ್ಷೆಗೋಸ್ಕರ ಲ್ಯಾಬಿಗೆ ಕಳಿಸಿದ.
ಅದನ್ನು ಕಿತ್ತು ತೆಗೆದ ಜಾಗ ಖಾಲಿಯಾಗಿಯೇ ಇದೆ.
ರೋಮಾಂಚನಗೊಳ್ಳಲು ಹೃದಯ ಇರಲೇ-ಬೇ ಕೆಂ ದಿ ಲ್ಲ.

*****
22-10-2008                                  - ಎಸ್ ಎನ್ ಸಿಂಹ, ಮೇಲುಕೋಟೆ.

No comments:

Post a Comment