Saturday, November 21, 2009

sajjanana saavu


ಸಜ್ಜನನ ಸಾವು



ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ಸಜ್ಜನ. ಹೆಸರಿಗೆ ತಕ್ಕಂತೆ ತುಂಬ ಒಳ್ಳೆಯವನು. ಅವನ ಒಳ್ಳೆಯತನದಿಂದಾಗಿ ಮಿಕ್ಕವರೂ ಒಳ್ಳೆಯವರಾಗಿದ್ದರು. 
ಅವನಿದ್ದ ರಾಜ್ಯದಲ್ಲಿ ಕಾಲೂರಲು ಸೈತಾನನಿಗೆ ಸಾದ್ಯವಾಗಿರಲಿಲ್ಲ. ತುಂಬ ಯೋಚಿಸಿದ ಸೈತಾನ. ಸಜ್ಜನ ಸತ್ತುದಲ್ಲದೆ ತನಗೆ ಉಳಿಗಾಲವಿಲ್ಲ. ಅವನನ್ನು ಕೊಂದರೆ ಸಾಮ್ರಾಜ್ಯವೆಲ್ಲ ತನ್ನದೇ. 
ಅದಕ್ಕಾಗಿ ಏನೆಲ್ಲ ಪ್ರಯತ್ನಿಸಿದ!

ಆಹಾರದಲ್ಲಿ ವಿಷ ಬೆರೆಸಿದ.

ಬೆಂಕಿಯಲ್ಲಿ ನೂಕಲೆತ್ನಿಸಿದ.

ಜಲಪಾತದಲ್ಲಿ ತಳ್ಳಲು ನೋಡಿದ.

ರೈಲು ಕಂಬಿಯ ಮೇಲೆ ಕಟ್ಟಿ ಎಸೆದ.

ಉಹುಂ, ಸಜ್ಜನನಿಗೆ ಸಾವೇ ಇಲ್ಲ.

ಪ್ರತಿ ಬಾರಿ ಪವಾಡ ಸದೃಶ ರೀತಿಯಲ್ಲಿ ಆತ ಪಾರಾಗುತ್ತಿದ್ದ.

ಸೈತಾನನಿಗೆ ತಲೆ ಚಿಟ್ಟು ಹಿಡಿದು ಹೋಯಿತು. 
ಕೊನೆಯ ಯತ್ನವೆಂದು ಒಂದು ಹೆಣ್ಣಿನ ವೇಷ ತಾಳಿ ಬಂದ. ತನಗೆ ವೈರಾಗ್ಯವನ್ನು ಉಪದೇಶಿಸಬೇಕೆಂದು ಕೇಳಿಕೊಂಡಳಾಕೆ. ತನ್ನ ಎಂದಿನ ಹಸನ್ಮುಖದಿಂದ ಒಪ್ಪಿದ ಸಜ್ಜನ. 
ಏಕಾಂತದಲ್ಲಿ ಅವನನ್ನು ತನ್ನ ಸೌಂದರ‍್ಯದಿಂದ ಒಲಿಸಿಕೊಳ್ಳಲು ಯತ್ನಿಸಿದಳವಳು. ಉಹುಂ, ಜಗ್ಗಲಿಲ್ಲ ಸಜ್ಜನ. ಹತ್ತು ನಿಮಿಷದ ನಂತರ ತನ್ನ ಬಟ್ಟೆಗಳನ್ನು ಹರಿದುಕೊಂಡು ಹೊರಬಂದ ಅವಳು, ಸಜ್ಜನ ತನ್ನ ಮೇಲೆ ಅತ್ಯಾಚಾರವೆಸಗಿದನೆಂದು ಗೋಳಿಡತೊಡಗಿದಳು.

ಅವಳ ಆಕ್ರಂದನ ಕೇಳಿ ಜನದ ಗುಂಪು ಸೇರಿತು. ಮೊದಲಿಗೆ ಯಾರೂ ಆ ಆರೋಪವನ್ನು ನಂಬಲಿಲ್ಲ.

ತನ್ನ ಎಂದಿನ ಹಸನ್ಮುಖದಿಂದಲೇ ಹೊರಬಂದ ಸಜ್ಜನ.

ಗುಂಪಿನಲ್ಲಿದ್ದ ಸೈತಾನನ ಸೇವಕನೊಬ್ಬ ಕೂಗಿದ. 

ಎಷ್ಟು ಧೂರ್ತ ಇದ್ದಾನೆ ಈತ. ಕಾಮವನ್ನು ಜಯಿಸಿದವರು ಯಾರೂ ಇಲ್ಲ. ಅಲ್ಲದೆ ಹೆಣ್ಣೊಬ್ಬಳು ತನ್ನ ಶೀಲದ ವಿಷಯದಲ್ಲಿ ಸುಳ್ಳು ಹೇಳುವಳೇನು?


ಗುಂಪಿನಲ್ಲಿ ಗುಜುಗುಜು. ಯಾರೋ ಒಬ್ಬ ನಿಜ! ನಿಜ! ಎಂದ.

ಅಷ್ಟೇ!

ಮರುಕ್ಷಣ ಸಜ್ಜನ ನಿಂತಲ್ಲಿಯೇ ಸತ್ತು ಹೋಗಿದ್ದ!



*****


14-10-2001ರ ಕನ್ನಡಪ್ರಭದಲ್ಲಿ ಪ್ರಕಟಿತ.   - ಎಸ್ ಎನ್ ಸಿಂಹ, ಮೇಲುಕೋಟೆ.


No comments:

Post a Comment