Saturday, November 21, 2009

yaarige enu beku


ಯಾರಿಗೆ ಏನು ಬೇಕು...!

     ಅವರಿಬ್ಬರೂ ತುಂಬ ಕಷ್ಟಪಟ್ಟುಕೊಂಡು, ಪ್ರಾಣಾಪಾಯವನ್ನೂ ಲೆಕ್ಕಿಸದೆ ಆ ಶಿಖರದ ತುದಿಗೆ ಬಂದಿದ್ದರು. ತಮ್ಮ ಸಂದೇಹಗಳಿಗೆ ನಿಶ್ಚಿತವಾದ ಸಮಾಧಾನ ಪಡೆಯುವ ನಿರೀಕ್ಷೆ ಅವರನ್ನು ಅಲ್ಲಿಗೆ ತಂದಿತ್ತು. ಮೂಳೆ ಕೊರೆಯುವ ಛಳಿಯಲ್ಲೂ ಅಲ್ಲೊಬ್ಬ ಯೋಗಿ ಮಂದಹಾಸ ಬೀರುತ್ತಾ ಕುಳಿತಿದ್ದ. ತಮ್ಮ ಜನ್ಮ ಸಾರ್ಥಕವಾಯಿತೆಂದು ಅವರಿಬ್ಬರೂ ಕಟಕಟಿಸುತ್ತಿದ್ದ ಹಲ್ಲುಗಳನ್ನು ತಹಬಂದಿಗೆ ತಂದುಕೊಳ್ಳುತ್ತಾ ಅವನನ್ನು ಪ್ರಶ್ನಿಸಿದರು.
     ಅವರಿಬ್ಬರೂ ಕೇಳಿದ್ದು ಒಂದೇ ಪ್ರಶ್ನೆಯಂತೆ ಯೋಗಿಗೆ ಭಾಸವಾಯ್ತು. ಎಷ್ಟಾದರೂ ಸಮದರ್ಶಿ! ಆದರೆ ಅವನಿಗೆ ಗೊತ್ತಿತ್ತು; ಪ್ರಶ್ನೆಗಳು ಒಂದೇ ಆದರೂ, ಕಾಲ, ದೇಶ ಮತ್ತು ಮುಖ್ಯವಾಗಿ; ಕೇಳುಗರ ಯೋಗ್ಯತೆಯನ್ನವಲಂಬಿಸಿ ಉತ್ತರಗಳು ಮಾತ್ರ ಬೇರೆಯೇ ಇರುತ್ತವೆ ಎಂದು!
     ಅವಳು ಕೇಳಿದ್ದಳು – ಗಂಡಸಿಗೆ ಬೇಕಾದುದೇನು?
     ಅವನು ಕೇಳಿದ್ದ - ಹೆಂಗಸಿಗೆ ಬೇಕಾದುದೇನು?
     ಮೃದು ಮಂದಹಾಸ ಬೀರುತ್ತಾ ಯೋಗಿ ಹೇಳತೊಡಗಿದ...
     “ಗಂಡಸಿಗೆ ಹೆಂಗಸಿನ ಮುಗ್ಧತೆ ಬೇಕು. ಅವಳು ಕೊಡುವ ಆತ್ಮವಿಶ್ವಾಸ ಬೇಕು. ಅವಳ ಮುಗ್ಧತೆ ಅವನಿಗೆ ಸಂತೋಷ ಕೊಡುತ್ತದೆ. ಅವಳು ತುಂಬುವ ಆತ್ಮವಿಶ್ವಾಸ ಅವನಿಗೆ ಭದ್ರತೆಯ ಭಾವ ನೀಡುತ್ತದೆ” ಎಂದು ಹೇಳಿದ ಅವನು, ಮುಂದುವರಿದು ಕೊಂಚ ಬಾಗಿ, ಅವಳ ಕಿವಿಯಲ್ಲಿ ಪಿಸುಗುಟ್ಟಿದ. “ಹೆಂಗಸಿನ ತಾಜಾತನದಷ್ಟು, ಅವಳ ನಿಷ್ಠೆಯಷ್ಟು, ಗಂಡಸನ್ನು ಮುದಗೊಳಿಸುವ ಸಂಗತಿ ಪ್ರಪಂಚದಲ್ಲಿ ಮತ್ತಾವುದೂ ಇಲ್ಲ. ಅದು ಅವನ ಅಹಂ ಅನ್ನು ಸಂಪೂರ್ಣ ತೃಪ್ತಿಪಡಿಸುತ್ತದೆ...”
     ಕಿವಿ ನಿಮಿರಿಸಿ ಆ ಮಾತುಗಳನ್ನು ಕೇಳಿಸಿಕೊಳ್ಳುವ ವಿಫಲ ಯತ್ನ ನಡೆಸುತ್ತಾ ಗಂಡಸು ಕೇಳಿದ. “ನನ್ನ ಪ್ರಶ್ನೆಗೆ ಉತ್ತರಿಸಿ ಗುರೂಜೀ, ಹೆಂಗಸಿಗೆ ಬೇಕಾದ್ದೇನು? ಗಂಡಸಿನ ಐಶ್ವರ್ಯವಾ? ಅವನ ಅಧಿಕಾರವಾ? ಅಥವಾ ಅವನ ಬಲಿಷ್ಠತೆಯಾ? ಇಲ್ಲಾ ಅವನ ಅನನ್ಯ, ಪರಿಶುದ್ಧ ಪ್ರೀತಿಯಾ? ಯಾವುದು? ಎಂದ.
     ಒಂದು ನಿಟ್ಟುಸಿರು ಬಿಟ್ಟು ನುಡಿದ ಯೋಗಿ;
     “ಮಗೂ, ಇದಕ್ಕೆ ನಿಖರವಾದ ಯಾವ ಉತ್ತರವೂ ಇಂದಿನವರೆಗೂ ಪ್ರಪಂಚದ ಯಾವ ಮೇಧಾವಿಗೂ ಸಿಕ್ಕಿಲ್ಲ. ದುರಂತವೆಂದರೆ ಅದು ಸ್ವಯಂ ಹೆಂಗಸಿಗೂ ಗೊತ್ತಿಲ್ಲ! ಹೇಳಲೇಬೇಕೆಂದರೆ ಅವಳಿಗೆ ಅದೆಲ್ಲವೂ ಬೇಕು! ಗಂಡಸಿನಲ್ಲಿ ಇನ್ನೂ ಏನಾದರೂ ಇದ್ದರೆ ಅದಕ್ಕಿಂತಲೂ ಅತಿರಿಕ್ತವಾದದ್ದು ಅವಳಿಗೆ ಬೇಕು! ಒಂದೊಮ್ಮೆ ಅವಳ ಎಲ್ಲ ಅಪೇಕ್ಷೆಗಳನ್ನು ಪೂರೈಸಿದರೂ, ಅದಕ್ಕಿಂತ ಮತ್ತೂ ಹೆಚ್ಚಿನದು ಅವಳಿಗೆ ಬೇಕು! ಹೆಂಗಸಿನ ಅಪೇಕ್ಷೆ ಎನ್ನುವುದು ಒಂದು ಬಗೆಯ ‘ಚಿರಂತನ ಅಪರ್ಯಾಪ್ತ ದ್ರಾವಣ’ದ ಹಾಗೆ! ದ್ರೌಪದಿಯ ಮಾತು ಗೊತ್ತಲ್ಲ? ‘ಪಂಚ ಮೇ ಪತಯಃ ಸಂತಿ ಷಷ್ಠಸ್ತು ಮಮ ರೋಚತೇ’...”
     ಇನ್ನೂ ಏನೇನು ಹೇಳುತ್ತಿದ್ದನೋ ಆ ಯೋಗಿ; ಅಷ್ಟರಲ್ಲಿ ಸಿಟ್ಟಿನಿಂದ ಎದ್ದು ನಿಂತ ಅವಳು ಭುಸುಗುಡುತ್ತಾ ಚೀರಿದಳು; “ಮೂರ್ಖರೇ! ಹೆಂಗಸಿಗೆ ಅದ್ಯಾವುದೂ ಬೇಕಿಲ್ಲ. ಅವಳಿಗೆ ಸ್ವಾತಂತ್ರ್ಯ ಬೇಕು. ಶತಶತಮಾನಗಳ ನಿಮ್ಮ ಶೋಷಣೆಗೆ, ವಂಚನೆಗೆ ಪ್ರತೀಕಾರ ಬೇಕು! ಹೂಂ! ಪ್ರತೀಕಾರ ಬೇಕು!”
     ಹಾಗೆ ಹೇಳುತ್ತಾ ದಡದಡನೆ ಬೆಟ್ಟವಿಳಿದು ತಪ್ಪಲಿಗೆ ಬಂದ ಅವಳು...
     ಒಬ್ಬ ಜರ್ನಲಿಸ್ಟ್ ಆಗಿಬಿಟ್ಟಳು!

*****
ಡಿಸೆಂಬರ್ 2006ರ ಓ ಮನಸೇ-39ರಲ್ಲಿ ಪ್ರಕಟಿತ.             - ಎಸ್ ಎನ್ ಸಿಂಹ. ಮೇಲುಕೋಟೆ

No comments:

Post a Comment