ಕೋಗಿಲೆ ಕಾಗೆಯಾದ ಕಥೆ
ಒಂದು ಕೋಗಿಲೆ ಇತ್ತು. ಸ್ವಚ್ಛಂದವಾಗಿ ಕುಹೂ ಕುಹೂ ಹಾಡುತ್ತಿತ್ತು.
ಅದರ ಧ್ವನಿ ಬಹಳ ಚೆನ್ನಾಗಿದೆ ಎಂದು ಒಬ್ಬನಿಗೆ ಅನ್ನಿಸಿತು. ಎಲಾ! ಇದಕ್ಕೆ ಸ ಪ ಸ ಹೇಳಿಕೊಟ್ಟು ಕಛೇರಿ ಇಡಿಸಿದರೆ ಭೇಷಾಗಿರುತ್ತೆ ಎಂದು ಅದನ್ನು ಹಿಡಿದುಕೊಂಡು ಬಂದ.
‘ಸ’ ಹೇಳಿಕೊಟ್ಟ. ಭಯವೋ, ಇಷ್ಟವಾಗಲಿಲ್ಲವೋ..,
‘ಕಾ’ ಅಂತು.
‘ಪ’
‘ಕಾ’
ಸಸ ರಿರಿ ಗಗ ಮಮ
ಕಾ ಕಾ ಕಾ ಕಾ
ಅವನಿಗೂ ಬೇಜಾರಾಯ್ತು. ಅಯ್ಯೋ ಮುಂಡೇದೇ. ನಿನಗೆ ಈ ಪಾಠ, ಇಂಥ ಬಂಧನ ಹಿಡಿಸಲಿಲ್ಲವೇನೋ. ಮೊದಲಿನಂತೆಯೇ ಇಷ್ಟ ಬಂದಂತೆ ಹಾಡಿಕೋ ಹೋಗು ಅಂತ ಬಿಟ್ಟುಬಿಟ್ಟ. ಪುರ್ರಂತ ಹಾರಿಹೋಯಿತು ಪರಪುಟ್ಟ. ಕೊಂಬೆಯ ಮೇಲೆ ಕುಳಿತು ಗಂಟಲು ಸರಿಮಾಡಿಕೊಂಡು ಹಾಡತೊಡಗಿತು.
ಕಾ ಕಾ ಕಾ ಕಾ, ಕಾ ಕಾ ಕಾ....
ಹೊಸತು ಹತ್ತಲಿಲ್ಲ. ಹಳತು ಮರೆತು ಹೋಗಿತ್ತು!
ಇವತ್ತಿಗೂ ಕೂಗುತ್ತಲೇ ಇದೆ.
ಕಾ ಕಾ ಕಾ ಕಾ, ಕಾ ಕಾ ಕಾ...
*****
03-03-2002ರ ಕನ್ನಡಪ್ರಭದಲ್ಲಿ ಪ್ರಕಟಿತ. - ಎಸ್ ಎನ್ ಸಿಂಹ, ಮೇಲುಕೋಟೆ.
No comments:
Post a Comment