Saturday, November 21, 2009

kannadi sullu heluvudilla


ಕನ್ನಡಿ ಸುಳ್ಳು ಹೇಳುವುದಿಲ್ಲ.
    
ಮೊದಲ ಭೇಟಿಯಲ್ಲೇ ‘ನಾನು ನಿನ್ನನ್ನು ಪ್ರೀತಿಸ್ತೀನಿ’ ಅಂದಿದ್ದ ಆತ.
     ನಕ್ಕುಬಿಟ್ಟಿದ್ದಳವಳು. ನಂಬಿರಲಿಲ್ಲ ಅವನನ್ನು. ಎಷ್ಟು ಜನರೋ ಅಂಥವರು!
     ಅಲ್ಲಿಂದಾಚೆ ಅವನು ಮತ್ತೆಂದೂ ಪ್ರೀತಿಯ ಮಾತೆತ್ತಲಿಲ್ಲ. ಆಡಿದ್ದೆಲ್ಲ ಬೇರೆಯದೇ. ಸಂಗೀತದ ಬಗ್ಗೆ, ಸಾಹಿತ್ಯದ ಬಗ್ಗೆ, ಕಂಪ್ಯೂಟರ್ ಪ್ರೋಗ್ರಾಮಿಂಗ್‍ನ ಸಮಸ್ಯೆಗಳ ಬಗ್ಗೆ, ನೂರೆಂಟು ಬೇಡದ ವಿಷಯಗಳ ಬಗ್ಗೆ! ಆದರೆ ಅವನ ಕಣ್ಣುಗಳು ಮಾತ್ರ ಮೊದಲಿನ ಆರಾಧನೆಯನ್ನೇ ಸೂಸುತ್ತಿದ್ದವು.
     ತಾಳ್ಮೆಗೆ ಮಿತಿಯಿರುತ್ತಲ್ಲವಾ? ಪ್ರೀತಿಯನ್ನು ಪದೇ ಪದೇ ವ್ಯಕ್ತಪಡಿಸದಿದ್ದರೆ ಹ್ಯಾಗೆ? ಹಾಗೆಂದು ಹೆಣ್ಣು ಬಯಸುವುದರಲ್ಲಿ ತಪ್ಪೇನಿದೆ? ತಪ್ಪೆಲ್ಲಾ ಗಂಡಸಿನದೇ. ಹೆಣ್ಣನ್ನು ಅರ್ಥೈಸಿಕೊಳ್ಳಲಾಗದ ಗಂಡಸಿನದು!
     ಅವಳಿಗೆ ಅನುಮಾನ. ಎಷ್ಟು ಅರಸಿಕ ಇವನು. ನನ್ನ ಸೌಂದರ್ಯಾನ ಒಮ್ಮೆಯಾದರೂ ಹೊಗಳಬಾರದಾ? ನನ್ನ ದೇಹದ ಬಗ್ಗೆ ಆಕರ್ಷಣೆ ಇಲ್ಲಾಂದ್ರೆ ಇವನನ್ನ ನಂಬೋದಾದರೂ ಹ್ಯಾಗೆ? ನನ್ನ ಥರಾನೇ ಬೇರೆಯವಳ ಹತ್ತಿರವೂ ವ್ಯವಹರಿಸ್ತಿದ್ರೆ? ಎಂದು ಕೋಪಗೊಂಡ ಅವಳು ಅವನೊಡನೆ ಮಾತೇ ಬಿಟ್ಟಳು. ಆದರೂ ಅವನಿಗೆ ತಿಳಿಯುವಂತೆ ‘ನೋಡೋದೇ ಒಂಥರಾ, ಮಾತಾಡೋದೇ ಒಂಥರಾ ಅಂದ್ರೆ, ಯಾರಿಗೆ ತಾನೇ ಕೋಪ ಬರೋಲ್ಲ?’ ಅಂದಳು.
     ಅವನಿಗೆ ಗೊಂದಲ! ‘ನಾನು ನಿನ್ನ ಪ್ರೀತಿಸ್ತೀನಿ ಅಂದ್ರೆ ನಂಬಲಿಲ್ಲ. ನೀನು ನನ್ನ ಪ್ರೀತಿಸದೆ ಇದ್ರೂ ಚಿಂತೆ ಇಲ್ಲ. ನಾನು ಮಾತ್ರ ಯಾವತ್ತಿಗೂ ನಿನ್ನ ಪ್ರೀತಿಸ್ತಾ ಇರ್ತೀನಿ. ನೀನು ತುಂಬ ಗುಣವಂತೆ’ ಎಂದ. ಆದರೆ ಆಗ ಕೂಡ ಅವಳ ರೂಪದ ಬಗ್ಗೆ ಕಿಂಚಿತ್ತಾದರೂ ಪ್ರಶಂಸಿಸಲಿಲ್ಲ.
     ನಿಜವಾಗಿ ಒಂದು ಹೆಣ್ಣಿನ ಸೋಲು ಅಲ್ಲವಾ ಅದು!
     ಉರಿದು ಬಿದ್ದಳು ಅವಳು. ‘ಎಷ್ಟು ಧೂರ್ತ ನೀನು! ನನಗಿಂತ ಸುಂದರವಾದ ಹೆಣ್ಣು ಕಂಡರೆ ನೀನು ನನ್ನ ಕಡೆಗಣಿಸೋಲ್ಲ ಅಂತ ಏನು ಗ್ಯಾರಂಟಿ? ನಿನ್ನ ನೆರಳು ಕಂಡರೂ ಅಸಹ್ಯವಾಗ್ತಿದೆ. ತೊಲಗು’ ಎಂದಳು.
     ಮೌನವಾಗಿ ಒಳಗೇ ರೋದಿಸುತ್ತಾ ಅಂತರ್ಮುಖಿಯಾಗಿಬಿಟ್ಟ. ಅನಿವಾರ್ಯವಾದ ವಿದಾಯವನ್ನು ನಗುವಿನ ಮುಖವಾಡ ಧರಿಸಿ ಸಲ್ಲಿಸಿದ.
ಅವಳಿಗೆ ಏನೆಲ್ಲ ಕೊಡಬೇಕೆಂದುಕೊಂಡಿದ್ದ!
     ತೋಳುಗಳಿಗೆ ತೋಳಬಂದಿ, ಕೊರಳ ತುಂಬ ಮುತ್ತು!
     ಕೊನೆಯದಾಗಿ ಅವಳಿಗೆ ಒಂದು ಪುಟ್ಟ ಕನ್ನಡಿಯನ್ನು ಕಾಣಿಕೆಯಾಗಿ ಕೊಟ್ಟ.
     ಯಾರು ಎಷ್ಟೇ ಸುಳ್ಳು ಹೇಳಬಹುದು.
     ಕನ್ನಡಿ ಸುಳ್ಳು ಹೇಳುವುದಿಲ್ಲ.
     ಅಂದ ಮಾತ್ರಕ್ಕೆ ಅದು...
     ಅಂತರಂಗದ ನಿಜವನ್ನೇನೂ ಪ್ರತಿಬಿಂಬಿಸುವುದಿಲ್ಲ!

    
*****
13-04-2002ರ ಕನ್ನಡಪ್ರಭದಲ್ಲಿ ಪ್ರಕಟಿತ.                      - ಎಸ್ ಎನ್ ಸಿಂಹ, ಮೇಲುಕೋಟೆ.

No comments:

Post a Comment