Saturday, November 21, 2009

theory of


ಥಿಯರಿ ಆ¥sóï...
    
ಮೊದಲು ಅವನು ಒಂದು ಪುಸ್ತಕದ ಹುಳುವಾಗಿದ್ದ.
      ಇತ್ತೀಚೆಗೆ ‘ವೆಬ್ ಕ್ರಿಮಿ’ಯಾಗಿಬಿಟ್ಟ.
      ಕಂಪ್ಯೂಟರಿಗೆ ‘ಕಿವಿ-ಬಾಯಿ’ ಅಳವಡಿಸಿದ ಮೇಲಂತೂ ಸ್ನೇಹಿತರನ್ನು ಕೂಡ ದೂರೀಕರಿಸಿದ.
      ಯಂತ್ರದ ಒಡನಾಟವೇ ಅವನ ಪ್ರಪಂಚವಾಗಿಹೋಯ್ತು.
      ಆದರೂ ಅವನು ಮನುಷ್ಯನೇ ತಾನೆ.
      ಕೆಲವೊಮ್ಮೆ ಇದ್ದಕ್ಕಿದ್ದಂತೆ ಅವನಲ್ಲಿ ಪ್ರಶ್ನೆಗಳು ಹುಟ್ಟಿಬಿಡುತ್ತಿದ್ದವು!
      ಅಂಥ ಒಂದು ಸಂದರ್ಭದಲ್ಲಿ ಕಂಪ್ಯೂಟರನ್ನು ಕೇಳಿದ.
      “ಸಮಾನ ಅಭಿರುಚಿಗಳಿಲ್ಲ ಎಂದು ತಿಳಿದ ಮೇಲೂ ಒಂದು ವ್ಯಕ್ತಿಯತ್ತ ಅತೀವ ಆಕರ್ಷಣೆ ಉಳಿಸಿಕೊಂಡಿರುವವರನ್ನು ಏನಂತ ಕರೀತಾರೆ?” ಎಂದ.
ಥೌಸಂಡ್ ಗಿಗಾಹಟ್ರ್ಸ್ ಸ್ಪೀಡಿನ ಮಲ್ಟಿ ಕೋರ್ ಪ್ರೊಸೆಸರ್ ಮತ್ತು ಒಪೆರಾ-5 ಸುಪರ್ ಫಾಸ್ಟ್ ಸರ್ಚ್ ಎಂಜಿನ್ ಹೊಂದಿದ್ದ ಆ ಸೂಪರ್ ಕಂಪ್ಯೂಟರಿಗೆ ಕೂಡ ಇದಕ್ಕೆ ಉತ್ತರಿಸಲು 30 ಸೆಕೆಂಡ್ ಬೇಕಾಯಿತು. ಮೂವತ್ತು ದೀ...ರ್ಘ ಟೆನ್ಷನ್ನಿನ ಯುಗಗಳು!
ಲಿಕ್ವಿಡ್ ಕ್ರಿಸ್ಟಲ್ ಡಿಸ್‍ಪ್ಲೇ ಪರದೆಯ ಮೇಲೆ ‘ಅಮರ ಪ್ರೇಮಿ’ ಎಂಬ ಅಕ್ಷರಗಳು ಮೂಡುತ್ತವೆ ಎಂಬ ನಿರೀಕ್ಷೆಯಲ್ಲಿ ಅತ ತನ್ನ ಕಣ್ಣುಗಳನ್ನು ಕೀಲಿಸಿಬಿಟ್ಟ.
ಆಗ ಅವನ ಹೃದಯದ ಕಂಪನದ ತೀವ್ರತೆ ತಿಳಿಯಲು ಸ್ಟೆತಾಸ್ಕೋಪ್ ಸಾಲುತ್ತಿರಲಿಲ್ಲ. ಭೂಕಂಪದ ತೀವ್ರತೆ ಅಳೆಯಲು ಇರುವ ‘ರಿಕ್ಟರ್ ಮಾಪಕ’ವನ್ನೇ ಇಡಬೇಕಿತ್ತು!
31ನೆಯ ಸ್ಫೋಟದ ಕ್ಷಣ...!
ಇಡೀ ಪರದೆಯ ತುಂಬ ಎರಡೇ ಅಕ್ಷರಗಳು.
ಮೂರ್ಖ!
ಸ್ತಂಭಿಸಿ ಹೋದ. ಮುಖಕ್ಕೆ ನುಗ್ಗಿದ್ದ ರಕ್ತವೆಲ್ಲ ಒಮ್ಮೆಗೇ ಇಳಿದು ಹೋಯ್ತು.
ಯೂ ಬ್ಯಾಸ್ಟರ್ಡ್! ದರಿದ್ರ ಯಂತ್ರವೇ! ಎಂದು ಅರಚಿದ.
ಶಾಂತವಾದ ಧ್ವನಿಯಲ್ಲಿ ಕಂಪ್ಯೂಟರ್ ಹೇಳಿತು. ಸಮಾಧಾನ ಫ್ರೆಂಡ್. ನೀನೀಗ ಅನುಭವಿಸಿದ ನೋವು ಎಷ್ಟು ಗೊತ್ತಾ? 9 ಡಾಲ್ಸ್! ಅಂದರೆ ಭೂಮಿಯ ಮೇಲೆ ಜೀವಿಯೊಂದು ಸಹಿಸಬಹುದಾದ ಮ್ಯಾಕ್ಸಿಮಮ್ ನೋವು, ಅರ್ಥಾತ್ ಪ್ರಸವ ವೇದನೆಗಿಂತ ಅರ್ಧ ಪಾಯಿಂಟ್ ಮಾತ್ರ ಕಮ್ಮಿ.
ಅದ್ಹೇಗೆ? ನನಗೆ ಯಾಕೆ ನೋವಾಗುತ್ತೆ? ಹೋಗ್ಹೋಗು..
ನನ್ನ ಹತ್ರಾನೇ ಬುದ್ಧಿವಂತಿಕೆಯ ಗೇಂ ಆಡಬೇಡ. ನಿನ್ನ ದೇಹದಲ್ಲಿ ಅಳವಡಿಸಿರೋ ಮೈಕ್ರೋಚಿಪ್ ನನಗೆಲ್ಲ ತಿಳಿಸಿಬಿಡುತ್ತೆ. ನೀನು ನನ್ನ ಬೈದ್ರೂ ಅಡ್ಡಿ ಇಲ್ಲ. ನಿನಗೆ ಸಹಾಯ ಮಾಡಬೇಕಾದ್ದು ನನ್ನ ಕರ್ಮ. ಈಗ ಸುಮ್ಮನೆ ನನ್ನ ಪ್ರಶ್ನೆಗಳಿಗೆ ಉತ್ತರಿಸು. ನಿನ್ನ ಸಮಸ್ಯೆ ಪರಿಹರಿಸೋಕೆ ಸಾಧ್ಯವೋ ನೋಡೋಣ.
ತನ್ನೊಳಗೇ ಏನೋ ಗೊಣಗಿಕೊಂಡ. ಆದರೂ ಗೋಣು ಹಾಕಿದ.
ಕೇಳಿತು.
ನೀನು ಯಾರನ್ನೋ ಪ್ರೀತಿಸ್ತಾ ಇದೀಯ ಮತ್ತು ವಿಫಲನಾಗಿದೀಯ. ಹೌದಾ?
ಹೌದು.
ಅವಳಿಗೆ ಏನಾದ್ರೂ ಪ್ರೆಸೆಂಟ್ ಮಾಡಿದೀಯಾ? ಬೆರಳಿಗೆ ಒಂದು ರಿಂಗ್, ಕಿವಿಗೊಂದು ಲೋಲಾಕು ಅಥವಾ ನೆನಪುಳಿಯುವಂಥ ವಿಶೇಷವಾದ್ದೇನಾದ್ರೂ?
ಇಲ್ಲ.
ಓಹ್! ಇರ್ಲಿ. ಅವಳು ಕಂಡ ತಕ್ಷಣ ಸಿಗರೇಟ್ ಎಸೆದುಬಿಟ್ಟು ತಪ್ಪಿತಸ್ಥನಂತೆ ಪೋಸು ಕೊಟ್ಟಿದೀಯಾ?
ಐ! ನಾನು ಫಫ್ ಹೊಡೆಯೋದೇ ಇಲ್ವೇ.
ಬುದ್ದೂ! ಅಟ್‍ಲೀಸ್ಟ್ ಒಂದು ಐಸ್‍ಕ್ರೀಂ ಆದ್ರೂ ಕೊಡ್ಸಿದೀಯಾ ಅವಳಿಗೆ?
ಊಹೂಂ. ಆದ್ರೆ ಅವಳನ್ನ ತುಂಬ ತುಂಬ ಪ್ರೀತಿಸ್ತೀನಿ ಅಂತ ತುಂಬ ಸಾರಿ ಹೇಳಿದೀನಿ.
ಹೋಗ್ಲಿ. ಅದನ್ನಾದ್ರೂ ಅವಳ ಕೈ ಹಿಡಕೊಂಡು ಹೇಳಿದ್ಯಾ? 
ಅದ್ಹೇಗೆ! ತಪ್ಪಲ್ವಾ?
ಮೂರ್ಖ! ನಿನ್ನ ಬಗ್ಗೆ ಕನಿಕರ ಆಗ್ತಾ ಇದೆ.
ದರಿದ್ರ ನಿರ್ಜೀವ ಯಂತ್ರವೇ! ನಿನಗೆ ಭಾವನೆಗಳ ಬಗೆಗೆ ಏನು ಗೊತ್ತು? ಪ್ರೇಮಕ್ಕೆ ಅಂತರಂಗದ ಭಾಷೆ ಇರುತ್ತೆ. ‘ಪ್ರೀತಿ’ ನಿಜವಾಗಿದ್ರೆ ಹೃದಯಗಳ ನಡುವೆ ಸಂವಹನ ನಡೆದೇ ನಡೆಯುತ್ತೆ. ‘ಪ್ಲಟಾನಿಕ್’ ಶಬ್ದದ ಅರ್ಥವಾದ್ರೂ ಗೊತ್ತಾ ನಿನಗೆ? ನನಗೇ ಪಾಠ ಹೇಳಬೇಡ.
ಥಿಯರಿಟಿಕಲೀ ಯು ಆರ್ ಪರ್ಫೆಕ್ಟ್ ಸರ್. ಆದರೆ ಪ್ರಾಕ್ಟಿಕಲೀ ನೋಡಿದಾಗ ಪ್ರೀತಿ ಅನ್ನೋದು ಪ್ರದರ್ಶನದಲ್ಲಿರುತ್ತೆ!
ಮತ್ತು ಸತ್ಯ ಯಾವಾಗಲೂ ಕೋಪ ತರಿಸುತ್ತೆ.
ಅವನಿಗೂ ಹಾಗೇ ಆಯ್ತು. ಒಂದು ಯಃಕಶ್ಚಿತ್ ಯಂತ್ರದಿಂದ ಈ ಮಾತುಗಳನ್ನು ಕೇಳಬೇಕಾಗಿ ಬಂದುದಕ್ಕೆ ರಕ್ತ ಕುದಿಯುತ್ತಿದ್ದರೂ, ಬಿದ್ದು ಹೋದ ದನಿಯಲ್ಲಿ ಕೇಳಿದ.
ಹಾಗಾದ್ರೆ ಪ್ರೀತಿ ಅನ್ನೋದು ಬರೀ ಪ್ರೀತಿ ಮಾತ್ರವೇ ಅಲ್ಲ!
ಹೌದು ಸರ್! ಕೇವಲ ಲಾಜಿಕ್‍ನಿಂದ ಜೀವಿಸೋಕೆ ಸಾಧ್ಯವಿಲ್ಲ. ಜೀವನ ಯಾವತ್ತೂ ತರ್ಕಬದ್ಧವಾಗೇ ನಡೆಯೋದಿಲ್ಲ ಮತ್ತು ಬಯಲಾಜಿಕಲ್ ಫೀಲಿಂಗ್ಸ್ ಇಲ್ಲದೆ...
ಮುಂದೆ ಏನು ಹೇಳುತ್ತಿತ್ತೋ...!
ದಭಾರನೆ ಎತ್ತಿ ಕುಕ್ಕಿದ ಅದನ್ನು!
ಸೃಷ್ಟಿಕರ್ತನನ್ನೇ ಪುಡಿಪುಡಿ ಮಾಡಿಬಿಟ್ಟಂತಹ ವಿಲಕ್ಷಣ ತೃಪ್ತಿಯಿತ್ತು ಅವನ ಮುಖದಲ್ಲಿ!

*****
23-06-2002ರ ಕನ್ನಡಪ್ರಭದಲ್ಲಿ ಪ್ರಕಟಿತ.                      - ಎಸ್ ಎನ್ ಸಿಂಹ, ಮೇಲುಕೋಟೆ.

No comments:

Post a Comment