ಮುಕ್ತ ಛಂದ
ಏಯ್! ನನಗೆ ಅರ್ಜೆಂಟಾಗಿ 5ಸಾವಿರ ರೂಪಾಯಿ ಬೇಕು ಕಣೋ! ಎಂದಳು.
ಅದು ಅವನಿಗೆ ‘ಹೊನ್ನಿನ ಜಿಂಕೆ ಬೇಕು’ ಅಂದಂತೇನೂ ಕೇಳಿಸಲಿಲ್ಲ.
‘ಆ ಸೌಗಂಧಿಕಾ ಪುಷ್ಪ ತಂದು ಕೊಡೋ ಭೀಮಾ’ ಎಂಬ ದನಿಯ ಬಿಸುಪಿತ್ತು ಅದರಲ್ಲಿ.
ಆದರೂ ಗಂಡಸಿನ ದುಷ್ಟಬುದ್ಧಿ!
ಯಾಕೆ? ಅಂದ.
ಅಪ್ಪನ ತಿಥಿ ಇದೆ. ಪೆಂಡಾಲಿನವನಿಗೆ ಅಡ್ವಾನ್ಸು ಕೊಡಬೇಕು ಅಂದಳು.
ಅವನಿಗೆ ಯಾರೋ ಹೇಳಿದ್ದರು. ‘ಹೆಂಗಸು ಸುಳ್ಳು ಹೇಳುತ್ತಿದ್ದಾಳೆ ಎಂಬುದು ಅರಿವಾದಾಗ ಹೆಚ್ಚು ಕೆದಕಬಾರದು. ಕೆದಕಿದರೆ ಸುಳ್ಳು ಸರಮಾಲೆಯಾಗುತ್ತೆ’ ಅಂತ. ಅಲ್ಲದೆ ಹೆಂಗಸಿನ ಧಾರ್ಮಿಕ ಶ್ರದ್ಧೆಯನ್ನು ಪೋಷಿಸಬೇಕಾದದ್ದು ಗಂಡಸಿನ ಸ್ವಾರ್ಥವೇ ತಾನೆ! ಮರುಪ್ರಶ್ನೆ ಮಾಡದೆ ಹೇಗೋ ಹಣ ಹೊಂದಿಸಿ ಕೊಟ್ಟ.
ಮುಂದಿನ ಸಲ ಭೇಟಿಯಾದಾಗ ಅವಳ ಕೈಲೊಂದು ಮೊಬೈಲಿತ್ತು. ‘ತುಂಬ ಹಿಂದೇನೇ ಅಪ್ಪ ಸಿಂಗಪೂರಿಂದ ಹ್ಯಾಂಡ್‍ಸೆಟ್ ತಂದುಕೊಟ್ಟಿದ್ದ. ಈಗ ಹಳ್ಳಿಗೆ ಟವರ್ ಬಂತು. ಆ್ಯಕ್ಟಿವೇಟ್ ಮಾಡಿಸಿದೆ’ ಅಂದಳು. ನಿಜವೇ! ಅದೇನೂ ಪೂರ್ತಿ ಸುಳ್ಳಲ್ಲ. ಅಪ್ಪನ ‘ದೆಸೆ’ಯಿಂದ ದೊರೆತದ್ದೇ ಅದು!
ಅಲ್ಲಿಂದ ಮುಂದೆ ಅವನಿಗೆ ‘ಹೆಣ್ಣು ಒಂದು ಕಾವ್ಯದಂತೆ’ ಎಂಬ ಮಾತಿನ ಅರ್ಥ ಆಗತೊಡಗಿತು...
ಸೀತೆಯ ಕಥೆ ಹೇಳಲು ವಾಲ್ಮೀಕಿಗೆ ಚೌಪದಿ ಸಾಕಾಯಿತು.
‘ಭಾರತ’ ಹೇಳಲು ಕುಮಾರವ್ಯಾಸನಿಗೆ ಷಟ್ಪದಿ ಬೇಕಾಯಿತು.
ಆಧುನಿಕ ಕವಿಯೊಬ್ಬನಿಗೆ ಐದು ಸಾಲಿನ ಕವಿತೆ ‘ದ್ರೌಪದಿ’ಯಾಗಿ ಕಂಡಿತು.
ತಲೆತಲಾಂತರದಿಂದಲೂ ‘ಕಾವ್ಯ’ ಚೌಪದಿ-ಷಟ್ಪದಿಗಳ ನಡುವೆ ಓಲಾಡುತ್ತಲೇ ಇದೆ!
ಆದರೆ ಕೈಗೆ ಮೊಬೈಲು ಸಿಕ್ಕ ಹೆಣ್ಣು ಒಂದು ಮಹಾಕಾವ್ಯ!
ಬಹುನಾಯಕರುಳ್ಳ ಕಾವ್ಯ!
ಅದು ಸಪ್ತಪದಿಗೂ ದಕ್ಕುವುದಿಲ್ಲ.
ಅದಕ್ಕೆ ಸರಿಯಾದದ್ದು ‘ಮುಕ್ತಛಂದ’!
ಅದಾವ ಪುಣ್ಯಾತ್ಮ ನಿಘಂಟಿನಲ್ಲಿ ಛಂದಶ್ಶಬ್ದಕ್ಕೆ ‘ಶೀಲ’ ಎಂಬ ಅರ್ಥವೂ ಇದೆಯೆಂದು ಟಂಕಿಸಿದನೋ!
ಇದಾವುದೂ ಅವನಿಗೆ ಕೊನೆಯವರೆಗೂ ಗೊತ್ತಾಗಲಿಲ್ಲ.
*****
14-06-2008 - ಎಸ್ ಎನ್ ಸಿಂಹ, ಮೇಲುಕೋಟೆ.
No comments:
Post a Comment